ಅಯತೊಲ್ಲಾ ಅಲಿ ಖಮೆನಿ ಅಂತ್ಯಕ್ರಿಯೆ ಆರಂಭ; ಲಕ್ಷಾಂತರ ಜನರ ಭಾಗವಹಿಸುವ ನಿರೀಕ್ಷೆ

1 Min Read
1 Min Read

ತೆಹ್ರಾನ್: ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಗ್ರ್ಯಾಂಡ್ ಅಯತೊಲ್ಲಾ ಸಯ್ಯಿದ್ ಅಲಿ ಖಮೆನಿ ಅವರ ಆರು ದಿನಗಳ ಸರ್ಕಾರಿ ಅಂತ್ಯಕ್ರಿಯೆ ಇಂದು ರಾಜಧಾನಿ ತೆಹ್ರಾನ್‌ನಲ್ಲಿ ಆರಂಭವಾಗಲಿದೆ.

ಅಂತಿಮ ನಮನ ಸಲ್ಲಿಸಲು ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆಯಿದ್ದು, ಸರ್ಕಾರ ವ್ಯಾಪಕ ಭದ್ರತೆ ಹಾಗೂ ಸಂಚಾರ ವ್ಯವಸ್ಥೆ ಕಲ್ಪಿಸಿದೆ.

ತೆಹ್ರಾನ್‌ನ ಗ್ರ್ಯಾಂಡ್ ಮೊಸಲ್ಲಾದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್, ಸಂಸತ್ ಸಭಾಧ್ಯಕ್ಷ ಮೊಹಮ್ಮದ್ ಬಾಘರ್ ಘಾಲಿಬಾಫ್, ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, ರೆವಲ್ಯೂಷನರಿ ಗಾರ್ಡ್ಸ್ ಕಮಾಂಡರ್ ಅಹ್ಮದ್ ವಾಹಿದಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.

ಭಾರತದ ಪರವಾಗಿ ಬಿಹಾರ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಸಯ್ಯದ್ ಅತಾ ಹಸ್ನೈನ್ ಹಾಗೂ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ಪಬಿತ್ರ ಮಾರ್ಗೆರಿಟಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.

ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಪಬಿತ್ರ ಮಾರ್ಗೆರಿಟಾ, ಭಾರತ ಸರ್ಕಾರ ಮತ್ತು ಭಾರತೀಯರ ಪರವಾಗಿ ಗೌರವ ನಮನ ಸಲ್ಲಿಸಿದ್ದು, ಇತ್ತೀಚಿನ ಸಂಘರ್ಷದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿರುವುದಾಗಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ರಷ್ಯಾದ ಮಾಜಿ ಅಧ್ಯಕ್ಷ ದಿಮಿತ್ರಿ ಮೆಡ್ವೆಡೆವ್, ಚೀನಾದ ಹಿರಿಯ ಪ್ರತಿನಿಧಿ ಹೆ ವೆಯ್, ಅಫ್ಘಾನಿಸ್ತಾನದ ಕಾರ್ಯನಿರ್ವಹಣಾ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಸೇರಿದಂತೆ ಹಲವು ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಕಳೆದ ಫೆಬ್ರವರಿ 28ರಂದು ಇಸ್ರೇಲ್ ಮತ್ತು ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲಿ ಖಮೆನಿ ಮೃತಪಟ್ಟಿದ್ದರು.

ಅವರ ಅಂತಿಮಯಾತ್ರೆ ಮುಂದಿನ ಕೆಲವು ದಿನಗಳ ಕಾಲ ಮುಂದುವರಿದು, ಜುಲೈ 9ರಂದು ಪವಿತ್ರ ನಗರ ಮಶ್ಹಾದ್ನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಬಳಿಕ 40 ದಿನಗಳ ಸಾರ್ವಜನಿಕ ಶೋಕಾಚರಣೆ ನಡೆಯಲಿದೆ.

Share This Article