ಗ್ರಾಮಾಯಣ’ ಎಂದಿಗೂ ಹಳೆಯದಾಗದ ಭಾವನೆಗಳ ಕಥೆ: ವಿನಯ್ ರಾಜ್‌ಕುಮಾರ್
ಜುಲೈ 3ರಂದು ಬಿಡುಗಡೆಯಾಗಲಿರುವ ‘ಗ್ರಾಮಾಯಣ’ ಚಿತ್ರದ ಬಗ್ಗೆ ನಟ ವಿನಯ್ ರಾಜ್‌ಕುಮಾರ್ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ವರ್ಷಗಳ ಹಿಂದೆ ಆರಂಭವಾದ ಈ ಸಿನಿಮಾ ಇದೀಗ ಪ್ರೇಕ್ಷಕರ ಮುಂದೆ ಬರುತ್ತಿದ್ದು, ಕಥೆಯಲ್ಲಿರುವ ಭಾವನೆಗಳೇ ಚಿತ್ರದ ದೊಡ್ಡ ಶಕ್ತಿ ಎಂದು ಅವರು ಹೇಳಿದ್ದಾರೆ.
“ಈ ಕಥೆಯನ್ನು ನಾನು ಬಹಳ ವರ್ಷಗಳ ಹಿಂದೆಯೇ ಕೇಳಿದ್ದೆ. ಆದರೆ ಇಂದು ಮತ್ತೆ ನೆನಪಿಸಿಕೊಂಡರೂ ಅದು ಹಳೆಯದಾಗಿದೆ ಎನ್ನುವ ಭಾವನೆ ಎಂದಿಗೂ ಬಂದಿಲ್ಲ. ‘ಗ್ರಾಮಾಯಣ’ ಯಾವತ್ತೂ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿಲ್ಲ. ಇದು ಹೇಳಲೇಬೇಕಾದ ಕಥೆ ಎಂಬ ನಂಬಿಕೆ ನನಗಿತ್ತು,” ಎಂದು ವಿನಯ್ ಹೇಳಿದರು.
ಈ ಸಿನಿಮಾ ಕೇವಲ ಗ್ರಾಮೀಣ ಬದುಕಿನ ನೆನಪುಗಳನ್ನು ಹೇಳುವುದಲ್ಲ, ಎಲ್ಲ ಕಾಲಕ್ಕೂ ಅನ್ವಯಿಸುವ ಮಾನವೀಯ ಸಂಬಂಧಗಳನ್ನು ಕಟ್ಟಿಕೊಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
“ಸ್ನೇಹ, ಪ್ರೀತಿ, ತಂದೆ-ತಾಯಿ, ಕುಟುಂಬ ಸಂಬಂಧಗಳು ಮತ್ತು ಒಬ್ಬ ವ್ಯಕ್ತಿಯ ತನ್ನ ಊರಿನೊಂದಿಗೆ ಇರುವ ಭಾವನಾತ್ಮಕ ಬಾಂಧವ್ಯವನ್ನು ಈ ಸಿನಿಮಾ ಹೇಳುತ್ತದೆ. ಗ್ರಾಮೀಣ ವಾತಾವರಣದಲ್ಲಿ ಬೆಳೆದ ಯಾರಿಗಾದರೂ ಈ ಕಥೆ ಖಂಡಿತವಾಗಿಯೂ ತಮ್ಮದೇ ಅನುಭವದಂತಾಗುತ್ತದೆ. ಇದೇ ಚಿತ್ರದ ವಿಶೇಷತೆ,” ಎಂದರು.
ಚಿತ್ರದಲ್ಲಿ ‘ಸಿಕ್ಸ್ತ್ ಸೆನ್ಸ್ ಸೀನಾ’ ಎಂಬ ಪಾತ್ರದಲ್ಲಿ ಅಭಿನಯಿಸಿರುವ ವಿನಯ್, ಈ ಸಿನಿಮಾ ಒಪ್ಪಿಕೊಳ್ಳಲು ನಿರ್ದೇಶಕ ದೇವನೂರು ಚಂದ್ರು ಅವರ ನಂಬಿಕೆ ಮತ್ತು ಪರಿಶ್ರಮವೇ ಪ್ರಮುಖ ಕಾರಣ ಎಂದು ಹೇಳಿದರು.
“ಚಿತ್ರ ಆರಂಭವಾಗುವ ಮುನ್ನವೇ ಚಂದ್ರು ಅವರು ಈ ಕಥೆಯೊಂದಿಗೆ ಬದುಕುತ್ತಿದ್ದರು. ಅನೇಕ ಗ್ರಾಮಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದರು. ಚಿತ್ರಕಥೆ ರೂಪಿಸುವ ಹಂತದಲ್ಲೇ ಸಾಕಷ್ಟು ಸಂಶೋಧನೆ ಮಾಡಿದ್ದರು. ನಾವು ಗ್ರಾಮಗಳಿಗೆ ತೆರಳಿ ಅಲ್ಲಿನ ಜನರನ್ನು ಭೇಟಿ ಮಾಡಿದ್ದೇವೆ. ಕಥೆಯಲ್ಲಿರುವ ನೈಜ ಘಟನೆಗಳನ್ನು ಅವರಿಂದಲೇ ಕೇಳಿದ್ದೇವೆ. ಆ ಅನುಭವವೇ ನಮ್ಮ ಕಾರ್ಯಾಗಾರಗಳ ಭಾಗವಾಗಿತ್ತು. ಪ್ರತಿಯೊಬ್ಬ ಕಲಾವಿದ ಹಾಗೂ ತಾಂತ್ರಿಕರು ಈ ಸಿನಿಮಾವನ್ನು ಪ್ರೀತಿಯಿಂದ ಮಾಡಿದ್ದಾರೆ,” ಎಂದು ವಿವರಿಸಿದರು.
ಇತ್ತೀಚೆಗೆ ಬಿಡುಗಡೆಯಾದ ಮತ್ತೊಂದು ಗ್ರಾಮೀಣ ಕಥಾಹಂದರದ ‘ಪೆಪೆ’ ಚಿತ್ರದೊಂದಿಗೆ ಹೋಲಿಕೆ ಮಾಡಲಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ವಿನಯ್, ಪ್ರತಿಯೊಂದು ಊರಿಗೂ ತನ್ನದೇ ಆದ ವೈಶಿಷ್ಟ್ಯವಿದೆ ಎಂದು ಹೇಳಿದರು.
“ಭಾರತವೇ ಗ್ರಾಮಗಳ ದೇಶ. ಕರ್ನಾಟಕದಲ್ಲಿಯೂ ಪ್ರತಿಯೊಂದು ಊರು ತನ್ನದೇ ಸಂಸ್ಕೃತಿ, ಆಹಾರ ಪದ್ಧತಿ, ಉಡುಗೆ, ಭಾಷೆ ಮತ್ತು ಜೀವನಶೈಲಿಯನ್ನು ಹೊಂದಿದೆ. ಎಲ್ಲ ಗ್ರಾಮಗಳನ್ನು ಒಂದೇ ರೀತಿಯಲ್ಲಿ ನೋಡಲು ಸಾಧ್ಯವಿಲ್ಲ. ‘ಗ್ರಾಮಾಯಣ’ ಕಥೆ ದೇವನೂರು ಚಂದ್ರು ಅವರ ಊರಿನ ಅನುಭವಗಳಿಂದ ಹುಟ್ಟಿಕೊಂಡದ್ದು. ಊರು ಬದಲಾಗಬಹುದು, ಆದರೆ ಭಾವನೆಗಳು ಎಲ್ಲೆಡೆ ಒಂದೇ. ಸ್ನೇಹ, ಪ್ರೀತಿ, ಕುಟುಂಬದ ಜೊತೆಗೆ ಈ ಸಿನಿಮಾದಲ್ಲಿ ಗ್ರಾಮವೇ ಒಂದು ಪ್ರಮುಖ ಪಾತ್ರದಂತೆ ಕಾಣಿಸುತ್ತದೆ. ಇದು ಕಲಾತ್ಮಕ ಸ್ಪರ್ಶ ಹೊಂದಿರುವ ವಾಣಿಜ್ಯ ಸಿನಿಮಾ,” ಎಂದು ವಿನಯ್ ರಾಜ್‌ಕುಮಾರ್ ಹೇಳಿದರು.


