‘ಮಿನಿಯನ್ಸ್ ಅಂಡ್ ಮಾನ್‌ಸ್ಟರ್ಸ್’ ಕಲ್ಪನೆಯೇ ರೋಚಕ: ನಿರ್ದೇಶಕ ಪಿಯರ್ ಕಾಫಿನ್
‘ಡೆಸ್ಪಿಕಬಲ್ ಮೀ’ (Despicable Me) ಸರಣಿಯ ಜನಪ್ರಿಯ ಹಳದಿ ಬಣ್ಣದ ಪುಟ್ಟ ಪಾತ್ರಗಳಾದ ಮಿನಿಯನ್ಸ್ ಇದೀಗ ಮತ್ತೊಮ್ಮೆ ಹೊಸ ಸಾಹಸದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿವೆ. ಈ ಬಾರಿ ಅವುಗಳ ಗುರಿ ಮತ್ತೊಬ್ಬರ ಕನಸನ್ನು ನನಸಾಗಿಸುವುದಲ್ಲ, ತಮ್ಮದೇ ಕನಸನ್ನು ಬೆನ್ನಟ್ಟುವುದು.
ಮುಂಬರುವ ‘ಮಿನಿಯನ್ಸ್ ಅಂಡ್ ಮಾನ್‌ಸ್ಟರ್ಸ್’ ಚಿತ್ರದ ನಿರ್ದೇಶಕ ಪಿಯರ್ ಕಾಫಿನ್, ಈ ಕಥೆಯ ಮೂಲ ಕಲ್ಪನೆ ಬಗ್ಗೆ ಮಾತನಾಡಿದ್ದು, ಇಲ್ಯೂಮಿನೇಶನ್ ಸ್ಟುಡಿಯೋ ಸಂಸ್ಥಾಪಕ ಕ್ರಿಸ್ ಮೆಲೆಡಾಂಡ್ರಿ ನೀಡಿದ ಈ ಆಲೋಚನೆ ತಮಗೆ ಮೊದಲ ಕ್ಷಣದಲ್ಲೇ ಇಷ್ಟವಾಯಿತು ಎಂದು ಹೇಳಿದ್ದಾರೆ.
“ಮಿನಿಯನ್ಸ್ ಯಾವಾಗಲೂ ಇನ್ನೊಬ್ಬರ ಕನಸಿಗಾಗಿ ಕೆಲಸ ಮಾಡುವ ಪಾತ್ರಗಳು. ಆದರೆ ಈ ಚಿತ್ರದಲ್ಲಿ ಅವುಗಳಿಗೆ ತಮ್ಮದೇ ಕನಸನ್ನು ಕಂಡುಕೊಳ್ಳುವ ಅವಕಾಶ ಸಿಕ್ಕಿದೆ. ಇದೇ ಈ ಚಿತ್ರದ ವಿಶೇಷತೆ,” ಎಂದು ಕಾಫಿನ್ ತಿಳಿಸಿದ್ದಾರೆ.
ಚಿತ್ರವನ್ನು 1920ರ ದಶಕದ ಹಿನ್ನೆಲೆಯಲ್ಲೇ ನಿರ್ಮಿಸಲು ಕಾರಣವನ್ನೂ ಅವರು ವಿವರಿಸಿದ್ದಾರೆ. “ಆ ಸಮಯದಲ್ಲಿ ಸಿನಿಮಾ ಇನ್ನೂ ಬೆಳವಣಿಗೆಯ ಹಂತದಲ್ಲಿತ್ತು. ದೈಹಿಕ ಹಾಸ್ಯ, ನೈಸರ್ಗಿಕ ಕಾಮಿಡಿ ಹಾಗೂ ಪ್ರಯೋಗಗಳಿಗೆ ಅವಕಾಶವಿದ್ದ ಕಾಲವಾಗಿದ್ದರಿಂದ, ಮಿನಿಯನ್ಸ್ ಕಥೆಗೆ ಅದು ಅತ್ಯಂತ ಸೂಕ್ತ ಹಿನ್ನೆಲೆ ಎಂದು ನಮಗೆ ಅನಿಸಿತು,” ಎಂದು ಹೇಳಿದ್ದಾರೆ.
ಚಿತ್ರದ ಕಥೆಗಾರ ಬ್ರಿಯಾನ್ ಲಿಂಚ್ ಕೂಡ ಈ ಚಿತ್ರದ ಬರವಣಿಗೆಯ ಅನುಭವವನ್ನು ಹಂಚಿಕೊಂಡಿದ್ದಾರೆ. “ಪಿಯರ್ ಜೊತೆ ಈ ಹಿಂದೆ ಕೆಲಸ ಮಾಡಿದ್ದರೂ, ಮೊದಲ ಬಾರಿಗೆ ಅವರೊಂದಿಗೆ ಕಥೆ ಬರೆಯುವ ಅವಕಾಶ ಸಿಕ್ಕಿತು. ಮಿನಿಯನ್ಸ್ ಪಾತ್ರಗಳನ್ನು ಪಿಯರ್ ಅವರೇ ಧ್ವನಿಮುದ್ರಿಸಿರುವುದರಿಂದ, ಅವುಗಳ ಜೊತೆ ಸೇರಿ ಕಥೆ ಬರೆದ ಅನುಭವ ಬಹಳ ವಿಶೇಷವಾಗಿತ್ತು,” ಎಂದು ಅವರು ಹೇಳಿದ್ದಾರೆ.
ನಾವು ಪರಸ್ಪರ ಕಥಾ ಕಲ್ಪನೆಗಳನ್ನು ಹಂಚಿಕೊಂಡು, ಒಬ್ಬರನ್ನೊಬ್ಬರು ನಗಿಸುವ ಪ್ರಯತ್ನದಲ್ಲಿ ಚಿತ್ರಕಥೆಯನ್ನು ರೂಪಿಸಿದ್ದೇವೆ ಎಂದು ಬ್ರಿಯಾನ್ ತಿಳಿಸಿದ್ದಾರೆ.
‘ಮಿನಿಯನ್ಸ್ ಅಂಡ್ ಮಾನ್‌ಸ್ಟರ್ಸ್’ ಚಿತ್ರವು ಗುರುವಾರ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಟ್ರೇ ಪಾರ್ಕರ್, ಜೆಸ್ಸಿ ಐಸೆನ್‌ಬರ್ಗ್, ಅಲಿಸನ್ ಜಾನಿ, ಕ್ರಿಸ್ಟೋಫ್ ವಾಲ್ಟ್ಸ್, ಫಿಲ್ ಲಾಮಾರ್, ಝೋಯಿ ಡ್ಯೂಚ್ ಮತ್ತು ಜೆಫ್ ಬ್ರಿಡ್ಜಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


