ಫಿಫಾ ವಿಶ್ವಕಪ್ 2026ರ ಗ್ರೂಪ್ ‘ಎಚ್’ ಪಂದ್ಯದಲ್ಲಿ ಕೇಪ್ ವರ್ಡೆ ತಂಡವು ಬಲಿಷ್ಠ ಉರುಗ್ವೆಯನ್ನು 2-2 ಡ್ರಾಗೆ ತಳ್ಳುವ ಮೂಲಕ ಗಮನ ಸೆಳೆದಿದೆ. ಫ್ಲೋರಿಡಾದಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಎರಡೂ ತಂಡಗಳು ತಲಾ ಒಂದು ಅಂಕ ಹಂಚಿಕೊಂಡವು.
ಪಂದ್ಯದ 21ನೇ ನಿಮಿಷದಲ್ಲಿ ಕೆವಿನ್ ಪಿನಾ ಅದ್ಭುತ ಫ್ರೀ ಕಿಕ್ ಮೂಲಕ ಗೋಲು ಬಾರಿಸಿ ಕೇಪ್ ವರ್ಡೆಗೆ ಮುನ್ನಡೆ ತಂದುಕೊಟ್ಟರು. ಈ ಗೋಲು ವಿಶ್ವಕಪ್ ಇತಿಹಾಸದಲ್ಲಿ ಕೇಪ್ ವರ್ಡೆ ದಾಖಲಿಸಿದ ಮೊದಲ ಗೋಲು ಎಂಬ ವಿಶೇಷತೆಯನ್ನೂ ಪಡೆದಿದೆ.
ಇದಕ್ಕೆ ತಿರುಗೇಟು ನೀಡಿದ ಉರುಗ್ವೆ ಪರ ಮ್ಯಾಕ್ಸಿ ಅರೌಜೊ ಹಾಗೂ ಅಗಸ್ಟಿನ್ ಕಾನೋಬಿಯೊ ಗೋಲುಗಳನ್ನು ದಾಖಲಿಸಿ ತಂಡವನ್ನು ಮುನ್ನಡೆಗೆ ತಂದರು. ಆದರೆ ಪಂದ್ಯದ ಅಂತಿಮ ಹಂತದಲ್ಲಿ ಉರುಗ್ವೆಯ ರಕ್ಷಣಾ ವಿಭಾಗದ ತಪ್ಪನ್ನು ಸದುಪಯೋಗಪಡಿಸಿಕೊಂಡ ಹೆಲ್ಡರ್ ವರೆಲಾ ಸಮಬಲದ ಗೋಲು ಬಾರಿಸಿ ಕೇಪ್ ವರ್ಡೆಗೆ ಅಮೂಲ್ಯ ಅಂಕ ತಂದುಕೊಟ್ಟರು.
ಈ ಫಲಿತಾಂಶದೊಂದಿಗೆ ಗ್ರೂಪ್ ‘ಎಚ್’ನಲ್ಲಿ ಉರುಗ್ವೆ ಮತ್ತು ಕೇಪ್ ವರ್ಡೆ ತಲಾ ಎರಡು ಅಂಕಗಳೊಂದಿಗೆ ಮುಂದಿನ ಹಂತದ ನಿರ್ಣಾಯಕ ಪಂದ್ಯಗಳತ್ತ ಮುಖ ಮಾಡಿವೆ.
ಇರಾನ್-ಬೆಲ್ಜಿಯಂ ಪಂದ್ಯ ಗೋಲುರಹಿತ ಡ್ರಾ
ಗ್ರೂಪ್ ‘ಜಿ’ಯಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಇರಾನ್ ಮತ್ತು ಬೆಲ್ಜಿಯಂ ತಂಡಗಳು ಗೋಲುರಹಿತ ಡ್ರಾಗೆ ತೃಪ್ತಿಪಟ್ಟವು. 66ನೇ ನಿಮಿಷದಲ್ಲಿ ಬೆಲ್ಜಿಯಂನ ನಾಥನ್ ಎಂಗೋಯ್ ಕೆಂಪು ಕಾರ್ಡ್ ಪಡೆದು ಹೊರನಡೆದರೂ, ಹೆಚ್ಚುವರಿ ಆಟಗಾರರ ಲಾಭವನ್ನು ಇರಾನ್ ತಂಡ ಬಳಸಿಕೊಳ್ಳಲು ವಿಫಲವಾಯಿತು.
ಸ್ಪೇನ್‌ಗೆ ಭರ್ಜರಿ ಜಯ, ಮುಂದಿನ ಸುತ್ತಿಗೆ ಅರ್ಹತೆ
ಗ್ರೂಪ್ ‘ಎಚ್’ನ ಮತ್ತೊಂದು ಪಂದ್ಯದಲ್ಲಿ ಸ್ಪೇನ್ 4-0 ಅಂತರದಲ್ಲಿ ಸೌದಿ ಅರೇಬಿಯಾವನ್ನು ಮಣಿಸಿ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿತು. ಲಮೀನ್ ಯಮಾಲ್, ಮಿಕೆಲ್ ಒಯಾರ್ಜಬಲ್ (2 ಗೋಲು) ಹಾಗೂ ಸೌದಿ ಆಟಗಾರ ಹಸನ್ ಅಲ್ತಂಬಾಕ್ತಿ ಅವರ ಆತ್ಮಘಾತಿ ಗೋಲು ಸ್ಪೇನ್‌ಗೆ ಸುಲಭ ಜಯ ತಂದುಕೊಟ್ಟವು.
ಎರಡು ಪಂದ್ಯಗಳಿಂದ ನಾಲ್ಕು ಅಂಕಗಳನ್ನು ಗಳಿಸಿರುವ ಸ್ಪೇನ್ ನಾಕೌಟ್ ಹಂತದತ್ತ ಹೆಜ್ಜೆ ಇಟ್ಟಿದ್ದು, ಸೌದಿ ಅರೇಬಿಯಾ ಕೇವಲ ಒಂದು ಅಂಕದೊಂದಿಗೆ ಸಂಕಷ್ಟದಲ್ಲಿದೆ.
ಇಂದಿನ ಪ್ರಮುಖ ಪಂದ್ಯಗಳು
- ನ್ಯೂಜಿಲೆಂಡ್ vs ಈಜಿಪ್ಟ್ – ಗ್ರೂಪ್ ‘ಜಿ’ (ಬೆಳಗ್ಗೆ 6:30 IST)
- ಅರ್ಜೆಂಟಿನಾ vs ಆಸ್ಟ್ರಿಯಾ – ಗ್ರೂಪ್ ‘ಜೆ’ (ರಾತ್ರಿ 10:30 IST)


