ಟೆಲಿಗ್ರಾಂನಲ್ಲಿ ‘ಲೀಕ್’ ಪ್ರಶ್ನೆಪತ್ರಿಕೆ ಬಲೆ! ವಿದ್ಯಾರ್ಥಿಗಳು, ಪೋಷಕರಿಗೆ ಎನ್‌ಟಿಎ ಕಟ್ಟುನಿಟ್ಟಿನ ಎಚ್ಚರಿಕೆ

1 Min Read
1 Min Read

ನವದೆಹಲಿ: ನೀಟ್ (NEET-UG) ಮರುಪರೀಕ್ಷೆಗೆ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ಪ್ರಶ್ನೆಪತ್ರಿಕೆ ಲೀಕ್ ಹಾಗೂ ಹಣ ವಸೂಲಿ ವಂಚನೆಗಳ ಬಗ್ಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಎಚ್ಚರಿಕೆ ನೀಡಿದೆ.

ಎನ್‌ಟಿಎ ಮಾಹಿತಿ ಪ್ರಕಾರ, ಟೆಲಿಗ್ರಾಂ ಸೇರಿದಂತೆ ಕೆಲವು ಆನ್‌ಲೈನ್ ವೇದಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಂಚಕರು, ಮರುಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ನೀಡುವುದಾಗಿ ಸುಳ್ಳು ಭರವಸೆ ನೀಡಿ ₹14,000 ರಿಂದ ₹25,000ರವರೆಗೆ ಹಣ ವಸೂಲು ಮಾಡಲು ಯತ್ನಿಸುತ್ತಿದ್ದಾರೆ. ಆದರೆ ಮರುಪರೀಕ್ಷೆಯ ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಇದೇ ವೇಳೆ, ಪರೀಕ್ಷೆಗೆ ಮುನ್ನ ನಡೆದಂತೆ ತೋರಿಸುವ ನಕಲಿ ಚಾಟ್‌ಗಳ ವಿಡಿಯೊಗಳನ್ನು ‘ಸಾಕ್ಷ್ಯ’ವೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಇವು ಸಂಪೂರ್ಣ ಸುಳ್ಳು ಹಾಗೂ ದಾರಿತಪ್ಪಿಸುವ ಪ್ರಯತ್ನಗಳಾಗಿವೆ ಎಂದು ಎನ್‌ಟಿಎ ತಿಳಿಸಿದೆ.

ಎನ್‌ಟಿಎ ಮಹಾನಿರ್ದೇಶಕ ಅಭಿಷೇಕ್ ಸಿಂಗ್ ಮಾತನಾಡಿ, ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಭದ್ರತೆಯನ್ನು ಖಚಿತಪಡಿಸಲು ಹಲವು ಹಂತಗಳ ಸುರಕ್ಷತಾ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು. ಪ್ರಶ್ನೆಪತ್ರಿಕೆ ಸಿದ್ಧಪಡಿಸುವುದು, ಭಾಷಾಂತರ, ಮುದ್ರಣ, ಸಾಗಣೆ ಹಾಗೂ ಪರೀಕ್ಷಾ ದಿನದವರೆಗೆ ಸಂಗ್ರಹಣೆ ಸೇರಿದಂತೆ ಪ್ರತಿಯೊಂದು ಹಂತದಲ್ಲೂ ಕಠಿಣ ಭದ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಎನ್‌ಟಿಎ ಸಂಪೂರ್ಣ ಬದ್ಧವಾಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ಅಧಿಕೃತ ಮೂಲಗಳಿಂದ ಮಾತ್ರ ಮಾಹಿತಿಯನ್ನು ಪಡೆಯುವಂತೆ ಮನವಿ ಮಾಡಿದೆ.

Share This Article
Leave a Comment