ನವದೆಹಲಿಯಲ್ಲಿ ‘ದಲಿತ ಮುಖ್ಯಮಂತ್ರಿ’ ಘೋಷಣೆ: ಜಿ.ಪರಮೇಶ್ವರ್‌ಗೆ ಸಿಎಂ ಸ್ಥಾನ ನೀಡಲು ಒತ್ತಾಯ

1 Min Read
1 Min Read

ನವದೆಹಲಿ: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನ ಕುರಿತ ಚರ್ಚೆಗಳು ತೀವ್ರವಾಗಿರುವ ನಡುವೆಯೇ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ‘ದಲಿತ ಮುಖ್ಯಮಂತ್ರಿ’ ಬೇಡಿಕೆ ಮತ್ತೊಮ್ಮೆ ಸ್ಪಷ್ಟವಾಗಿ ಕೇಳಿಬಂದಿದೆ.

ದಲಿತ ಸಮುದಾಯಕ್ಕೆ ನ್ಯಾಯ ಒದಗಿಸುವ ದೃಷ್ಟಿಯಿಂದ, ಗೃಹ ಸಚಿವರಾದ ಜಿ.ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿ, ಅವರ ಬೆಂಬಲಿಗರು ಶನಿವಾರ ಕಾಂಗ್ರೆಸ್ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸುಮಾರು ಒಂದು ಡಜನ್‌ಗೂ ಅಧಿಕ ಮಂದಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಇಂದಿರಾ ಭವನದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದ್ದ ವೇಳೆ, ಬಾಬಾಸಾಹೇಬ್ ಅಂಬೇಡ್ಕರ್ ದಲಿತ ಸೇವಾ ಸಮಿತಿ ನೇತೃತ್ವದಲ್ಲಿ ಈ ಪ್ರತಿಭಟನೆ ಆಯೋಜಿಸಲಾಯಿತು. ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಭಾಗವಹಿಸಿದ್ದರು ಎಂಬುದು ಗಮನಾರ್ಹ.

ಪ್ರತಿಭಟನಾಕಾರರು, ದಲಿತ ಸಮುದಾಯದ ಹಿರಿಯ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿಯಾಗಿರುವ ಡಾ. ಜಿ. ಪರಮೇಶ್ವರ್ ಅವರ ಭಾವಚಿತ್ರವಿರುವ ಬ್ಯಾನರ್‌ಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ತಮಿಳುನಾಡಿನ ಸಂಸದ ತೋಲ್ ತಿರುಮಾವಳವನ್ ಸಹ ಡಾ. ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳು ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾಗಿ ತಮ್ಮ ಮನವಿಯನ್ನು ಸಲ್ಲಿಸಿದರು. ಅಲ್ಲದೆ, ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ನಿವಾಸಕ್ಕೂ ಮನವಿ ಪತ್ರ ರವಾನಿಸಲಾಗಿದೆ.

ಎಐಸಿಸಿ ಕಚೇರಿ ಎದುರು ಮಾತನಾಡಿದ ಪ್ರತಿಭಟನಾಕಾರರು, “ದಲಿತ ಸಮುದಾಯವು ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಬೆಂಬಲಿಗರಾಗಿದ್ದು, ಪಕ್ಷದ ಅಧಿಕಾರ ಸಾಧನೆಗೆ ಮಹತ್ವದ ಪಾತ್ರ ವಹಿಸಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಡಾ. ಜಿ. ಪರಮೇಶ್ವರ್ ಅವರ ನಾಯಕತ್ವದಲ್ಲಿ ಕಾಂಗ್ರೆಸ್ 122 ಸ್ಥಾನಗಳನ್ನು ಗೆದ್ದಿತ್ತು. ಇತ್ತೀಚಿನ ಚುನಾವಣೆಯಲ್ಲೂ ದಲಿತ ಸಮುದಾಯ ಕಾಂಗ್ರೆಸ್ ಪರವಾಗಿ ದೃಢವಾಗಿ ನಿಂತಿದೆ. ಈ ಹಿನ್ನೆಲೆಯಲ್ಲಿ ದಲಿತ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ಸ್ಥಾಪಿಸಬೇಕು” ಎಂದು ಆಗ್ರಹಿಸಿದರು.

Share This Article
Leave a Comment