ನವದೆಹಲಿ: ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿ ದೇಶದಲ್ಲಿ ಅಸ್ಥಿರತೆ ಸೃಷ್ಟಿಸಲು ಪ್ರತಿಪಕ್ಷಗಳು ಪ್ರಯತ್ನಿಸುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಆರೋಪಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿರುವ ತಮ್ಮ ಹೇಳಿಕೆಯಲ್ಲಿ, ‘ಆಡಳಿತ ಬದಲಾವಣೆ’ (Regime Change) ಎಂಬ ಪದದ ಬಳಕೆಯೇ ಪ್ರತಿಪಕ್ಷಗಳ ಉದ್ದೇಶವನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.
ಚುನಾವಣಾ ಸುಧಾರಣೆಗಳು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಅಥವಾ ಯುವಜನರ ಭವಿಷ್ಯ ಪ್ರತಿಪಕ್ಷಗಳ ಹೋರಾಟದ ಉದ್ದೇಶವಲ್ಲ ಎಂದು ನಬೀನ್ ಆರೋಪಿಸಿದ್ದಾರೆ. ಬದಲಾಗಿ, ದೇಶದಲ್ಲಿ ಅರಾಜಕತೆ ಸೃಷ್ಟಿಸಿ ಯಾವುದೇ ಬೆಲೆ ತೆತ್ತಾದರೂ ಅಧಿಕಾರ ಪಡೆಯುವುದು ಅವುಗಳ ಗುರಿಯಾಗಿದೆ ಎಂದು ದೂರಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಕ್ಕೆ ಬರುವ ಮಾರ್ಗ ಜನರ ಜನಾದೇಶವೇ ಹೊರತು ಗೊಂದಲ ಮತ್ತು ಅರಾಜಕತೆಯಲ್ಲ ಎಂದು ಅವರು ಹೇಳಿದ್ದಾರೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಕ್ಕೆ ಭಾರತೀಯರು ಮತ್ತು ಬಿಜೆಪಿ ಅವಕಾಶ ನೀಡುವುದಿಲ್ಲ ಎಂದೂ ತಿಳಿಸಿದ್ದಾರೆ.
ಇದೇ ವಿಚಾರವಾಗಿ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, ‘ಆಡಳಿತ ಬದಲಾವಣೆ’ಯಂತಹ ಪದಗಳ ಬಳಕೆ ದೇಶದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನಗಳ ಸೂಚನೆಯಾಗಿದೆ ಎಂದು ಆರೋಪಿಸಿದ್ದಾರೆ.
ಹಬ್ಬದ ಅವಧಿಯಲ್ಲಿ ಮಧ್ಯ ದೆಹಲಿಯಲ್ಲಿ ಪ್ರತಿಭಟನೆಗಳನ್ನು ಆಯೋಜಿಸುವುದರ ಹಿಂದೆ ದೇಶದ ಬೆಳೆಯುತ್ತಿರುವ ಆರ್ಥಿಕತೆಗೆ ಹಾನಿ ಉಂಟುಮಾಡುವ ಉದ್ದೇಶವಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.


