ರಿಯಾದ್: ಸೌದಿ ಅರೇಬಿಯಾದಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಪ್ರಜೆಗಳು ಸ್ಥಳೀಯ ಅಧಿಕಾರಿಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಲಹೆ ನೀಡಿದೆ. ವಾಯುದಾಳಿ ಸಂಭವಿಸಿದ ಸಂದರ್ಭದಲ್ಲಿ ಮನೆಯೊಳಗೆ ಅಥವಾ ಸುರಕ್ಷಿತ ಸ್ಥಳದಲ್ಲೇ ಇರಬೇಕು. ಅಲ್ಲದೆ, ಪ್ರಸ್ತುತ ಘಟನೆಗಳಿಗೆ ಸಂಬಂಧಿಸಿದ ವಿಡಿಯೊಗಳು ಮತ್ತು ಸುದ್ದಿಗಳನ್ನು ಪರಿಶೀಲಿಸದೆ ಹಂಚಿಕೊಳ್ಳಬಾರದು ಎಂದು ಸೂಚಿಸಿದೆ.
ಹೊಸದಾಗಿ ಬಿಡುಗಡೆ ಮಾಡಿರುವ ಸಲಹಾ ಸೂಚನೆಯಲ್ಲಿ, ಅಕ್ಟೋಬರ್ 10ರಂದು ರಿಯಾದ್ ವಿಮಾನ ನಿಲ್ದಾಣದ ಮೇಲಿನ ದಾಳಿಯಲ್ಲಿ ಗಾಯಗೊಂಡಿದ್ದ ಇಬ್ಬರು ಭಾರತೀಯರು ಇನ್ನೂ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಮತ್ತೊಬ್ಬ ಭಾರತೀಯನನ್ನು ಐಸಿಯುನಿಂದ ಹೆಚ್ಚಿನ ನಿಗಾ ಘಟಕಕ್ಕೆ (High Dependency Unit) ಸ್ಥಳಾಂತರಿಸಲಾಗಿದೆ. ಇನ್ನು ನಾಲ್ವರು ಸಾಮಾನ್ಯ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ವಿಮಾನ ಸೇವೆಗಳಲ್ಲಿ ವ್ಯತ್ಯಯ
ರಿಯಾದ್ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳು ಇನ್ನೂ ಸ್ಥಗಿತಗೊಂಡಿವೆ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ. ದಮ್ಮಾಮ್, ಜೆಡ್ಡಾ ಮತ್ತು ಮದೀನಾ ವಿಮಾನ ನಿಲ್ದಾಣಗಳಲ್ಲಿ ವಿಮಾನ ಸೇವೆಗಳು ಮುಂದುವರಿದಿದ್ದರೂ, ಕೆಲವು ವ್ಯತ್ಯಯಗಳು ಕಂಡುಬರುತ್ತಿವೆ.
ಭಾರತೀಯ ವಿಮಾನಯಾನ ಸಂಸ್ಥೆಗಳು ಅಕ್ಟೋಬರ್ 17ರವರೆಗೆ ಸೌದಿ ಅರೇಬಿಯಾಕ್ಕೆ ತೆರಳುವ ಮತ್ತು ಅಲ್ಲಿಂದ ಭಾರತಕ್ಕೆ ಬರುವ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿವೆ ಎಂದು ವರದಿ ತಿಳಿಸಿದೆ. ಆದರೆ, ಸೌದಿಯಾದ ವಿಮಾನಯಾನ ಸಂಸ್ಥೆಯು ದಮ್ಮಾಮ್, ಜೆಡ್ಡಾ ಮತ್ತು ಮದೀನಾದಿಂದ ನಿಗದಿತ ವಿಮಾನ ಸೇವೆಗಳನ್ನು ಮುಂದುವರಿಸಿದೆ. ಫ್ಲೈನಾಸ್ ಸಂಸ್ಥೆಯು ದಮ್ಮಾಮ್–ಲಖನೌ ಮಾರ್ಗದಲ್ಲಿ ನಿಗದಿತ ವಿಮಾನಗಳನ್ನು ನಿರ್ವಹಿಸುತ್ತಿದೆ.
ಸೌದಿ ಅರೇಬಿಯಾದಲ್ಲಿರುವ ಭಾರತೀಯರು ಪ್ರಯಾಣಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಯನ್ನು ಪರಿಶೀಲಿಸಿ, ಸ್ಥಳೀಯ ಅಧಿಕಾರಿಗಳ ಸುರಕ್ಷತಾ ಸೂಚನೆಗಳನ್ನು ಪಾಲಿಸುವಂತೆ ರಾಯಭಾರ ಕಚೇರಿ ಒತ್ತಾಯಿಸಿದೆ.


