ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಭಾರತಕ್ಕೆ ಒಳನುಸುಳಲು ಯತ್ನಿಸುತ್ತಿದ್ದ ನಾಲ್ವರು ಉಗ್ರರು ನೆಲಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಸಂಘಟನೆಯ ಪ್ರಮುಖ ಕಮಾಂಡರ್ ಕೂಡ ಸೇರಿದ್ದಾರೆ ಎಂದು ವರದಿಯಾಗಿದೆ.
ಮೃತ ಉಗ್ರರನ್ನು ಮೊಹಮ್ಮದ್ ಫೈಜಾನ್, ಮೊಹಮ್ಮದ್ ಇಷ್ಟಿಯಾಕ್, ಮೊಹಮ್ಮದ್ ವಕಾಸ್ ಮತ್ತು ಮೊಹಮ್ಮದ್ ಆಸಿಮ್ ಎಂದು ಗುರುತಿಸಲಾಗಿದೆ. ಇವರು ಪಾಕಿಸ್ತಾನ ಆಕ್ರಮಿತ ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಹಜೀರಾ ತಾಲ್ಲೂಕಿನ ಮಂಡ್ಲಾ, ಮದರ್ಪುರ ಪ್ರದೇಶದ ನಿವಾಸಿಗಳೆಂದು ವರದಿಯಲ್ಲಿ ತಿಳಿಸಲಾಗಿದೆ.
ಕೃಷ್ಣ ಘಾಟಿ ವಲಯದ ನಂಗಿ ಟಕ್ರಿ ಪ್ರದೇಶದಲ್ಲಿ ಮಧ್ಯಾಹ್ನದ ವೇಳೆಗೆ ಉಗ್ರರ ಗುಂಪು ನಿಯಂತ್ರಣ ರೇಖೆ ದಾಟಿ ಒಳನುಸುಳಲು ಪ್ರಯತ್ನಿಸುತ್ತಿದ್ದಾಗ ನೆಲಬಾಂಬ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಸತ್ವಾಲ್-ನಾಕಿ ಮತ್ತು ನಂಗಿ ಟಕ್ರಿ ಪ್ರದೇಶವು ಗಡಿಯಾಚೆಯಿಂದ ಭಾರತದೊಳಗೆ ನುಸುಳಲು ಯತ್ನಿಸುವ ಉಗ್ರರು ಬಳಸುವ ಮಾರ್ಗಗಳಲ್ಲಿ ಒಂದೆಂದು ಹೇಳಲಾಗಿದೆ.
ಈ ಘಟನೆಯ ಕುರಿತು ಭದ್ರತಾ ಪಡೆಗಳಿಂದ ಹೆಚ್ಚಿನ ಅಧಿಕೃತ ಮಾಹಿತಿ ಲಭ್ಯವಾದ ಬಳಿಕವೇ ಕಾರ್ಯಾಚರಣೆಯ ಸಂಪೂರ್ಣ ವಿವರಗಳು ಸ್ಪಷ್ಟವಾಗಲಿವೆ.


