10 ವರ್ಷಗಳ ಸಾರಿಗೆ ಮಾಸ್ಟರ್ ಪ್ಲಾನ್: ITLA ರಚನೆಗೆ ಕೇಂದ್ರ ಸಂಪುಟ ಅನುಮೋದನೆ

2 Min Read
2 Min Read

ನವದೆಹಲಿ: ದೇಶದ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ಮತ್ತಷ್ಟು ಸಮನ್ವಯಗೊಳಿಸುವ ಉದ್ದೇಶದಿಂದ ಇಂಟಿಗ್ರೇಟೆಡ್ ಟ್ರಾನ್ಸ್‌ಪೋರ್ಟ್ ಆ್ಯಂಡ್ ಲಾಜಿಸ್ಟಿಕ್ಸ್ ಅಥಾರಿಟಿ (ITLA) ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ನಿರ್ಧಾರಗಳನ್ನು ಪ್ರಕಟಿಸಿದರು.

ಹೊಸ ಪ್ರಾಧಿಕಾರವು ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಸಂಶೋಧನೆ, ಸಮಗ್ರ ಯೋಜನೆ, ಯೋಜನೆಗಳ ತಾಂತ್ರಿಕ ಮೌಲ್ಯಮಾಪನ, ಮೇಲ್ವಿಚಾರಣೆ, ನೀತಿ ಬೆಂಬಲ ಹಾಗೂ ಪರಿಣಾಮದ ಮೌಲ್ಯಮಾಪನಕ್ಕೆ ಪ್ರಮುಖ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.

10 ವರ್ಷಗಳ ಸಾರಿಗೆ ಮಾಸ್ಟರ್ ಪ್ಲಾನ್

ITLA ದೇಶದ ಸಾರಿಗೆ ವ್ಯವಸ್ಥೆಗೆ 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯನ್ನು ಗಮನದಲ್ಲಿಟ್ಟುಕೊಂಡ ರಾಷ್ಟ್ರೀಯ ಸಾರಿಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಿದೆ. ರಸ್ತೆ, ರೈಲು, ಬಂದರು ಮತ್ತು ಸಾಗಣೆ, ನಾಗರಿಕ ವಿಮಾನಯಾನ, ಒಳನಾಡು ಜಲಮಾರ್ಗ, ಕರಾವಳಿ ಸಾಗಣೆ, ನಗರ ಸಾರಿಗೆ ಹಾಗೂ ಲಾಜಿಸ್ಟಿಕ್ಸ್ ಕ್ಷೇತ್ರಗಳನ್ನು ಈ ಸಮಗ್ರ ಯೋಜನೆ ಒಳಗೊಂಡಿರಲಿದೆ.

ವಿವಿಧ ಸಾರಿಗೆ ಸಚಿವಾಲಯಗಳು ರೂಪಿಸುವ ಅಲ್ಪಾವಧಿಯ ಹಾಗೂ ವಾರ್ಷಿಕ ಯೋಜನೆಗಳು ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ಗೆ ಹೊಂದಿಕೆಯಾಗುವಂತೆ ಪರಿಶೀಲಿಸುವ ಜವಾಬ್ದಾರಿಯೂ ಪ್ರಾಧಿಕಾರಕ್ಕೆ ಇರಲಿದೆ. ಇದರಿಂದ ವಿವಿಧ ಸಾರಿಗೆ ಮಾಧ್ಯಮಗಳ ನಡುವಿನ ಸಮನ್ವಯ ಮತ್ತು ಬಹುಮಾದರಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ಸಿಗಲಿದೆ.

₹500 ಕೋಟಿಗೂ ಅಧಿಕ ಯೋಜನೆಗಳ ತಾಂತ್ರಿಕ ಪರಿಶೀಲನೆ

ಕೇಂದ್ರ ಸರ್ಕಾರದ ₹500 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವೆಚ್ಚದ ಮೂಲಸೌಕರ್ಯ ಯೋಜನೆಗಳ ತಾಂತ್ರಿಕ ಮೌಲ್ಯಮಾಪನವನ್ನು ITLA ಕೈಗೊಳ್ಳಲಿದೆ. ಯೋಜನೆಗಳ ಹಣಕಾಸು ಮೌಲ್ಯಮಾಪನವು ಈಗಿರುವ ವ್ಯವಸ್ಥೆಯಲ್ಲಿಯೇ ಮುಂದುವರಿಯಲಿದೆ. ಅನುಷ್ಠಾನದ ಮೇಲ್ವಿಚಾರಣೆ ಹಾಗೂ ಯೋಜನೆ ಪೂರ್ಣಗೊಂಡ ಬಳಿಕ ಅದರ ಪರಿಣಾಮದ ಮೌಲ್ಯಮಾಪನವನ್ನೂ ಪ್ರಾಧಿಕಾರ ನಡೆಸಲಿದೆ.

ಇದರ ಜೊತೆಗೆ GSTN ಇ-ವೇ ಬಿಲ್, FASTag, Vahan, GPS ಆಧಾರಿತ ವ್ಯವಸ್ಥೆಗಳು ಮತ್ತು ನಗರ ಸಂಚಾರ ನಿರ್ವಹಣಾ ವ್ಯವಸ್ಥೆಗಳಿಂದ ದತ್ತಾಂಶ ಸಂಗ್ರಹಿಸಿ ರಾಷ್ಟ್ರೀಯ ಸಾರಿಗೆ ದತ್ತಾಂಶ ಭಂಡಾರ ನಿರ್ಮಿಸುವ ಉದ್ದೇಶವಿದೆ. ಈ ದತ್ತಾಂಶವನ್ನು ಸರಕು ಸಾಗಣೆ ಹರಿವು ಹಾಗೂ ಇತರ ಸಾರಿಗೆ ವಿಶ್ಲೇಷಣೆಗಳಿಗೆ ಬಳಸಲಾಗುತ್ತದೆ.

₹10,000 ಕೋಟಿ ಎಸ್‌ಎಂಇ ಗ್ರೋತ್ ಫಂಡ್‌ಗೆ ಅಸ್ತು

ಕೇಂದ್ರ ಸಂಪುಟವು ಇದೇ ವೇಳೆ ₹10,000 ಕೋಟಿ ಮೊತ್ತದ ಎಸ್‌ಎಂಇ ಗ್ರೋತ್ ಫಂಡ್ ಸ್ಥಾಪನೆಗೂ ಅನುಮೋದನೆ ನೀಡಿದೆ. ಉತ್ತಮ ವ್ಯವಹಾರ ಸಾಮರ್ಥ್ಯ ಹೊಂದಿರುವ ಹಾಗೂ ವಿಸ್ತರಣೆಗೆ ಅವಕಾಶವಿರುವ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ದೀರ್ಘಾವಧಿಯ ಈಕ್ವಿಟಿ ಬಂಡವಾಳ ಒದಗಿಸುವುದು ನಿಧಿಯ ಪ್ರಮುಖ ಉದ್ದೇಶವಾಗಿದೆ.

ನಿರ್ಮಾಣ ಕ್ಷೇತ್ರಕ್ಕೆ ಸೇರಿದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ನಿಧಿಯ ಬಹುಪಾಲು ಹೂಡಿಕೆ ಹರಿಸುವ ಉದ್ದೇಶವಿದ್ದು, ಸೇವೆಗಳು, ತಂತ್ರಜ್ಞಾನ, ನವೋದ್ಯಮ ಹಾಗೂ ಕಾರ್ಯತಂತ್ರದ ಮೌಲ್ಯ ಸರಪಳಿಗೆ ಸಂಬಂಧಿಸಿದ ಉದ್ಯಮಗಳಿಗೂ ಬೆಂಬಲ ದೊರೆಯಲಿದೆ.

ಈ ನಿಧಿಯು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಮರ್ಥ್ಯ ವಿಸ್ತರಣೆ, ಹೊಸ ತಂತ್ರಜ್ಞಾನ ಅಳವಡಿಕೆ ಹಾಗೂ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಲು ಅಗತ್ಯವಿರುವ ದೀರ್ಘಾವಧಿಯ ಬಂಡವಾಳಕ್ಕೆ ನೆರವಾಗಲಿದೆ.

Share This Article