ಬ್ಯಾಂಕ್ ಮುಷ್ಕರಕ್ಕೂ ಮುನ್ನ ಮಹತ್ವದ ನಿರ್ಧಾರ: ಸೆ.27 ಭಾನುವಾರ ಬ್ಯಾಂಕ್‌ಗಳು ಓಪನ್

1 Min Read
1 Min Read

ನವದೆಹಲಿ: ಬ್ಯಾಂಕ್ ಗ್ರಾಹಕರಿಗೆ ಅನುಕೂಲವಾಗುವಂತೆ ಇದೇ ತಿಂಗಳ ಸೆಪ್ಟೆಂಬರ್ 27ರ ಭಾನುವಾರದಂದು ದೇಶದ ಎಲ್ಲ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳನ್ನು (RRBs) ತೆರೆದಿಡಲು ಕೇಂದ್ರ ಹಣಕಾಸು ಸಚಿವಾಲಯ ನಿರ್ಧರಿಸಿದೆ.

ಸೆಪ್ಟೆಂಬರ್ 28ರಿಂದ 30ರವರೆಗೆ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಮೂರು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೂ ಮುನ್ನ ಸೆಪ್ಟೆಂಬರ್ 26 ಮತ್ತು 27ರಂದು ವಾರಾಂತ್ಯದ ರಜೆ ಇರುವುದರಿಂದ ಸತತವಾಗಿ ಬ್ಯಾಂಕ್ ಸೇವೆಗಳಿಗೆ ಅಡಚಣೆ ಉಂಟಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ.

ಬ್ಯಾಂಕ್ ಶಾಖೆಗಳು, ಎಟಿಎಂ ಸೇವೆ ಮುಂದುವರಿಕೆ

ಭಾನುವಾರ ಬ್ಯಾಂಕ್‌ಗಳನ್ನು ಕಾರ್ಯನಿರ್ವಹಿಸುವಂತೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅನುಮೋದನೆ ನೀಡಿದೆ. ಇದರಂತೆ ಬ್ಯಾಂಕ್ ಶಾಖೆಗಳು, ಕಚೇರಿಗಳು, ಎಟಿಎಂ-ಲಿಂಕ್ ಶಾಖೆಗಳು ಹಾಗೂ ಕರೆನ್ಸಿ ಚೆಸ್ಟ್‌ಗಳು ಸೆಪ್ಟೆಂಬರ್ 27ರಂದು ಕಾರ್ಯನಿರ್ವಹಿಸಲಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಗ್ರಾಹಕರಿಗೆ ಅಗತ್ಯವಿರುವ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಅಗತ್ಯ ಸೇವೆಗಳು ನಿರಂತರವಾಗಿ ಲಭ್ಯವಾಗುವಂತೆ ಬ್ಯಾಂಕ್ ಆಡಳಿತ ಮಂಡಳಿಗಳಿಗೂ ಸೂಚಿಸಲಾಗಿದೆ.

ಮುಷ್ಕರ ಮುಂದೂಡಲು ಮನವಿ

ಪ್ರಸ್ತಾವಿತ ಮೂರು ದಿನಗಳ ಬ್ಯಾಂಕ್ ಮುಷ್ಕರವನ್ನು ಮುಂದೂಡುವಂತೆ ಕೇಂದ್ರ ಸರ್ಕಾರ ಹಾಗೂ ಬ್ಯಾಂಕ್ ಆಡಳಿತ ಮಂಡಳಿಗಳು ಸಂಬಂಧಿತ ಕಾರ್ಮಿಕ ಸಂಘಟನೆಗಳಿಗೆ ಮನವಿ ಮಾಡಿವೆ.

ಇದರ ನಡುವೆಯೂ ಮುಷ್ಕರದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತೊಂದರೆಯಾಗದಂತೆ ಅಗತ್ಯ ಬ್ಯಾಂಕಿಂಗ್ ಸೇವೆಗಳನ್ನು ಮುಂದುವರಿಸಲು ಪರ್ಯಾಯ ವ್ಯವಸ್ಥೆಗಳು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

Share This Article