ಇಪಿಎಫ್‌ಒ ವೇತನ ಮಿತಿ ₹15,000ರಿಂದ ₹25,000ಕ್ಕೆ ಏರಿಕೆ; 51 ಲಕ್ಷ ಉದ್ಯೋಗಿಗಳಿಗೆ ಲಾಭ

1 Min Read
1 Min Read

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಅಡಿಯಲ್ಲಿ ಕಡ್ಡಾಯವಾಗಿ ಒಳಪಡುವ ಉದ್ಯೋಗಿಗಳ ಮಾಸಿಕ ವೇತನ ಮಿತಿಯನ್ನು ಕೇಂದ್ರ ಸರ್ಕಾರವು ₹15,000ರಿಂದ ₹25,000ಕ್ಕೆ ಹೆಚ್ಚಿಸಿದೆ. ಕೇಂದ್ರ ಸಚಿವ ಸಂಪುಟದ ಈ ನಿರ್ಧಾರದಿಂದ ದೇಶದ 51 ಲಕ್ಷಕ್ಕೂ ಹೆಚ್ಚು ಹೆಚ್ಚುವರಿ ಉದ್ಯೋಗಿಗಳು ಇಪಿಎಫ್‌ಒ ವ್ಯಾಪ್ತಿಗೆ ಬರಲಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವರು, ಈ ನಿರ್ಧಾರದಿಂದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳು ಮತ್ತಷ್ಟು ವಿಸ್ತರಿಸಲಿವೆ ಎಂದು ಹೇಳಿದರು. ವೇತನ ಮಿತಿಯನ್ನು ಹೆಚ್ಚಿಸುವುದರಿಂದ ಸರ್ಕಾರಕ್ಕೆ ವಾರ್ಷಿಕವಾಗಿ ಸುಮಾರು ₹11,339 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ ಎಂದು ಅವರು ತಿಳಿಸಿದರು.

ವಿಶ್ವಕರ್ಮ ಜಯಂತಿಯಿಂದಲೇ ಜಾರಿ

ಪರಿಷ್ಕೃತ ವೇತನ ಮಿತಿ ವಿಶ್ವಕರ್ಮ ಜಯಂತಿಯಾದ ಇಂದಿನಿಂದಲೇ ಜಾರಿಗೆ ಬರಲಿದೆ ಎಂದು ಅಶ್ವಿನಿ ವೈಷ್ಣವ್ ಘೋಷಿಸಿದರು. ಇದರಿಂದ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳಿಗೆ ಭವಿಷ್ಯ ನಿಧಿ ಉಳಿತಾಯ, ಪಿಂಚಣಿ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳ ವ್ಯಾಪ್ತಿ ವಿಸ್ತರಿಸಲಿದೆ.

2004ರಿಂದ 2014ರವರೆಗೆ ಇಪಿಎಫ್‌ಒ ಕಡ್ಡಾಯ ವ್ಯಾಪ್ತಿಗೆ ಸಂಬಂಧಿಸಿದ ವೇತನ ಮಿತಿಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಬಳಿಕ 2014ರ ಸೆಪ್ಟೆಂಬರ್‌ನಲ್ಲಿ ಈ ಮಿತಿಯನ್ನು ₹15,000ಕ್ಕೆ ಹೆಚ್ಚಿಸಲಾಗಿತ್ತು. ಇದೀಗ ವೇತನ ಏರಿಕೆ, ಆದಾಯದ ಹೆಚ್ಚಳ ಮತ್ತು ಔಪಚಾರಿಕ ಉದ್ಯೋಗಗಳ ವಿಸ್ತರಣೆಯನ್ನು ಗಮನದಲ್ಲಿಟ್ಟುಕೊಂಡು ಮಿತಿಯನ್ನು ₹25,000ಕ್ಕೆ ಹೆಚ್ಚಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಪಿಎಫ್‌ ಮತ್ತು ಪಿಂಚಣಿ ಸೌಲಭ್ಯ ವಿಸ್ತರಣೆ

ವೇತನ ಮಿತಿ ಹೆಚ್ಚಳದಿಂದ ಹೆಚ್ಚಿನ ಉದ್ಯೋಗಿಗಳು ಭವಿಷ್ಯ ನಿಧಿ ಉಳಿತಾಯ ವ್ಯವಸ್ಥೆಗೆ ಸೇರ್ಪಡೆಯಾಗಲಿದ್ದಾರೆ. ಇದರ ಜೊತೆಗೆ ಉದ್ಯೋಗಿಗಳ ಪಿಂಚಣಿ ಯೋಜನೆ (EPS) ಅಡಿಯಲ್ಲಿ ಪಿಂಚಣಿ ಭದ್ರತೆಯೂ ವಿಸ್ತರಿಸಲಿದೆ.

ಕೇಂದ್ರ ಸರ್ಕಾರದ ಈ ಕ್ರಮವು ಔಪಚಾರಿಕ ಉದ್ಯೋಗ ವಲಯದ ವಿಸ್ತರಣೆಗೆ ಉತ್ತೇಜನ ನೀಡುವುದರ ಜೊತೆಗೆ, ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ದೀರ್ಘಾವಧಿಯ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶ ಹೊಂದಿದೆ ಎಂದು ವರದಿಯಾಗಿದೆ.

Share This Article