ನವದೆಹಲಿ: ಭಾರತೀಯ ವಾಯುಪಡೆಯ ಸ್ಕ್ವಾಡ್ರನ್ ಲೀಡರ್ ಭಾವನಾ ಕಾಂತ್ ಅವರು ಮಹತ್ವದ ಸಾಧನೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಗ್ವಾಲಿಯರ್ನ ಟ್ಯಾಕ್ಟಿಕ್ಸ್ ಆ್ಯಂಡ್ ಏರ್ ಕಾಂಬ್ಯಾಟ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ನಲ್ಲಿ ‘ಫೈಟರ್ ಕಾಂಬ್ಯಾಟ್ ಲೀಡರ್’ ಅರ್ಹತೆ ಪಡೆದ ಭಾರತೀಯ ವಾಯುಪಡೆಯ ಮೊದಲ ಮಹಿಳಾ ಅಧಿಕಾರಿಯಾಗಿ ಅವರು ಹೊರಹೊಮ್ಮಿದ್ದಾರೆ.
ಭಾವನಾ ಕಾಂತ್ ಅವರ ಈ ಸಾಧನೆಯನ್ನು ಭಾರತೀಯ ವಾಯುಪಡೆ ಐತಿಹಾಸಿಕ ಮೈಲಿಗಲ್ಲು ಎಂದು ಬಣ್ಣಿಸಿದೆ. ವೃತ್ತಿಪರ ಶ್ರೇಷ್ಠತೆ, ಯುದ್ಧತಂತ್ರದ ಸಾಮರ್ಥ್ಯ ಹಾಗೂ ವಾಯು ಕಾರ್ಯಾಚರಣೆಗಳಲ್ಲಿ ನಾಯಕತ್ವದ ಗುಣಗಳನ್ನು ಅವರು ಪ್ರದರ್ಶಿಸಿದ್ದಾರೆ ಎಂದು ವಾಯುಪಡೆ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ತಿಳಿಸಿದೆ.
ಆಕಾಶದಲ್ಲಿ ನಾಯಕತ್ವ ವಹಿಸುವ ಸಾಮರ್ಥ್ಯವುಳ್ಳ ಅಧಿಕಾರಿಗಳನ್ನು ಬೆಳೆಸುವ ಭಾರತೀಯ ವಾಯುಪಡೆಯ ಬದ್ಧತೆಯನ್ನೂ ಈ ಸಾಧನೆ ಮತ್ತೊಮ್ಮೆ ಪ್ರತಿಬಿಂಬಿಸುತ್ತದೆ ಎಂದು IAF ಹೇಳಿದೆ.
ಭಾವನಾ ಕಾಂತ್ ಅವರ ಈ ಸಾಧನೆ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಹೆಚ್ಚುತ್ತಿರುವ ಪಾತ್ರ ಮತ್ತು ವೃತ್ತಿಪರ ಸಾಮರ್ಥ್ಯಕ್ಕೆ ಮತ್ತೊಂದು ಮಹತ್ವದ ಉದಾಹರಣೆಯಾಗಿದೆ.


