ನವದೆಹಲಿ: ವಿಶ್ವ ಆನೆ ದಿನದ ಅಂಗವಾಗಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅವರು ಆನೆಗಳು ಹಾಗೂ ಮಾನವರ ಸಹಬಾಳ್ವೆಯ ಭವಿಷ್ಯವನ್ನು ಸುರಕ್ಷಿತಗೊಳಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಸಚಿವರು, ಭಾರತದಲ್ಲಿ 14 ರಾಜ್ಯಗಳಲ್ಲಿ 33 ಆನೆ ಸಂರಕ್ಷಿತ ಪ್ರದೇಶಗಳು ಕಾರ್ಯನಿರ್ವಹಿಸುತ್ತಿದ್ದು, 150 ವೈಜ್ಞಾನಿಕವಾಗಿ ಗುರುತಿಸಲಾದ ಆನೆ ಕಾರಿಡಾರ್ಗಳು (ಆನೆಗಳ ಸಂಚಾರದ ಪ್ರಮುಖ ಮಾರ್ಗಗಳು) ಇವೆ ಎಂದು ತಿಳಿಸಿದ್ದಾರೆ.
ಆನೆಗಳ ಸಂಖ್ಯೆಯ ವೈಜ್ಞಾನಿಕ ಮೇಲ್ವಿಚಾರಣೆ, ಮಾನವ–ಆನೆ ಸಂಘರ್ಷವನ್ನು ಕಡಿಮೆ ಮಾಡಲು ಕೈಗೊಳ್ಳಲಾಗುತ್ತಿರುವ ಕ್ರಮಗಳು ಸೇರಿದಂತೆ ಹಲವು ರೀತಿಯಲ್ಲಿ ದೇಶದಲ್ಲಿ ಆನೆ ಸಂರಕ್ಷಣೆಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಆನೆಗಳ ಭವಿಷ್ಯ ಸುರಕ್ಷಿತವಾಗಿದ್ದರೆ, ಅವುಗಳ ಆವಾಸಸ್ಥಾನವಾಗಿರುವ ಅರಣ್ಯಗಳು, ಜೀವವೈವಿಧ್ಯ ಮತ್ತು ದೇಶದ ಪರಿಸರ ಪರಂಪರೆಯೂ ಸುರಕ್ಷಿತವಾಗಿರುತ್ತದೆ ಎಂದು ಭೂಪೇಂದ್ರ ಯಾದವ್ ಒತ್ತಿ ಹೇಳಿದ್ದಾರೆ.
ಮುಂದಿನ ಪೀಳಿಗೆಗಳಿಗೂ ಭಾರತದ ಅರಣ್ಯಗಳು ಹಾಗೂ ನೈಸರ್ಗಿಕ ಭೂಪ್ರದೇಶಗಳಲ್ಲಿ ಆನೆಗಳು ಮುಕ್ತವಾಗಿ ಸಂಚರಿಸುವಂತಾಗಲು ಪ್ರತಿಯೊಬ್ಬರೂ ಸಂರಕ್ಷಣೆಯ ಪ್ರಯತ್ನಗಳಲ್ಲಿ ಕೈಜೋಡಿಸಬೇಕು ಎಂದು ಸಚಿವರು ಕರೆ ನೀಡಿದ್ದಾರೆ.


