ಚೆನ್ನೈ: ನಟ ಶಿವಕಾರ್ತಿಕೇಯನ್ ಅಭಿನಯದ ಬಹುನಿರೀಕ್ಷಿತ ತಮಿಳು ಚಿತ್ರ ‘ಸೆಯೋನ್’ ಇದೀಗ ಚಿತ್ರೀಕರಣದ ಮುಂದಿನ ಹಂತಕ್ಕೆ ಸಜ್ಜಾಗಿದೆ. ‘ತಾಯಿ ಕಿಳವಿ’ ಚಿತ್ರದ ನಿರ್ದೇಶಕ ಶಿವಕುಮಾರ್ ಮುರುಗೇಶನ್ ನಿರ್ದೇಶಿಸುತ್ತಿರುವ ಈ ಗ್ರಾಮೀಣ ಕಥಾಹಂದರದ ಚಿತ್ರಕ್ಕಾಗಿ ಶಿವಕಾರ್ತಿಕೇಯನ್ ಮಧುರೈಗೆ ತೆರಳಿದ್ದು, ಶೀಘ್ರದಲ್ಲೇ ಎರಡನೇ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.
ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡು ಸುಮಾರು ಒಂದು ತಿಂಗಳ ಬಳಿಕ ಇದೀಗ ಎರಡನೇ ಹಂತ ಆರಂಭವಾಗುತ್ತಿದೆ. ಚಿತ್ರದಲ್ಲಿ ಶಿವಕಾರ್ತಿಕೇಯನ್ ಅಭಿನಯಿಸುವ ಪಾತ್ರಕ್ಕೆ ಹಲವು ಸಾಹಸ ದೃಶ್ಯಗಳಿದ್ದು, ಆಕ್ಷನ್ ಸನ್ನಿವೇಶಗಳ ವಿನ್ಯಾಸದ ಜವಾಬ್ದಾರಿಯನ್ನು ಖ್ಯಾತ ಸ್ಟಂಟ್ ಜೋಡಿ ಅನ್ಬರಿವು ವಹಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಶಿವಕಾರ್ತಿಕೇಯನ್ಗೆ ಜೋಡಿಯಾದ ಭಾಗ್ಯಶ್ರೀ ಬೋರ್ಸೆ
‘ಸೆಯೋನ್’ನಲ್ಲಿ ಶಿವಕಾರ್ತಿಕೇಯನ್ಗೆ ನಾಯಕಿಯಾಗಿ ಭಾಗ್ಯಶ್ರೀ ಬೋರ್ಸೆ ಅಭಿನಯಿಸುತ್ತಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ‘ಕಾಂತಾ’ ಚಿತ್ರದ ಬಳಿಕ ಇದು ಅವರ ಎರಡನೇ ತಮಿಳು ಸಿನಿಮಾ.
ಬಾಲಾ ಶರವಣನ್ ಮತ್ತು ಅರುಳ್ದಾಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ವೇಳೆ ಕನ್ನಡದ ಖ್ಯಾತ ನಟ ರಾಜ್ ಬಿ. ಶೆಟ್ಟಿ ಕೂಡ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದು, ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಲಿದ್ದಾರೆ. ‘ಒಂದು ಮೊಟ್ಟೆಯ ಕಥೆ’ ಹಾಗೂ ‘ಗರೂಡ ಗಮನ ವೃಷಭ ವಾಹನ’ ಚಿತ್ರಗಳ ಮೂಲಕ ಗಮನ ಸೆಳೆದಿರುವ ರಾಜ್ ಬಿ. ಶೆಟ್ಟಿ ಅವರ ಪಾತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ.
ಚಿತ್ರದ ಕಥಾಹಂದರವನ್ನು ಸದ್ಯಕ್ಕೆ ಗೌಪ್ಯವಾಗಿರಿಸಲಾಗಿದ್ದು, ಈ ಹಿಂದೆ ಬಿಡುಗಡೆಯಾದ ಗ್ಲಿಂಪ್ಸ್ ವಿಡಿಯೊದಲ್ಲಿ ಶಿವಕಾರ್ತಿಕೇಯನ್ ಅವರ ಪಾತ್ರವನ್ನು ದೇವರಂತೆ ಕಾಣುವ ರೀತಿಯ ದೃಶ್ಯಗಳನ್ನು ತೋರಿಸಲಾಗಿತ್ತು.
ಬಲಿಷ್ಠ ತಾಂತ್ರಿಕ ತಂಡ
‘ಸೆಯೋನ್’ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸುತ್ತಿದ್ದು, ವಿವೇಕ್ ವಿಜಯಕುಮಾರ್ ಛಾಯಾಗ್ರಹಣ, ಸ್ಯಾನ್ ಲೋಕೇಶ್ ಸಂಕಲನ ಹಾಗೂ ಆರ್.ಕೆ. ನಾಗು ಕಲಾ ನಿರ್ದೇಶನದ ಜವಾಬ್ದಾರಿ ವಹಿಸಿದ್ದಾರೆ.
ಚಿತ್ರವು ಅಕ್ಟೋಬರ್ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಕಮಲ್ ಹಾಸನ್ ನಿರ್ಮಾಣ
ನಟ ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಆರ್. ಮಹೇಂದ್ರನ್ ಅವರೊಂದಿಗೆ ಚಿತ್ರ ನಿರ್ಮಾಣವಾಗುತ್ತಿದೆ. ಶಿವಕಾರ್ತಿಕೇಯನ್ ಅವರೊಂದಿಗೆ ಈ ನಿರ್ಮಾಣ ಸಂಸ್ಥೆಯ ಎರಡನೇ ಸಹಯೋಗ ಇದಾಗಿದೆ. ಈ ಹಿಂದೆ 2024ರಲ್ಲಿ ಬಿಡುಗಡೆಯಾದ ‘ಅಮರನ್’ ಚಿತ್ರದಲ್ಲಿ ಇವರಿಬ್ಬರ ಸಹಯೋಗ ನಡೆದಿತ್ತು.
ನಿರ್ದೇಶಕ ಶಿವಕುಮಾರ್ ಮುರುಗೇಶನ್ ಮತ್ತು ಶಿವಕಾರ್ತಿಕೇಯನ್ ಅವರ ಎರಡನೇ ಸಹಯೋಗವೂ ಇದಾಗಿದ್ದು, ಇವರ ಹಿಂದಿನ ‘ತಾಯಿ ಕಿಳವಿ’ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. ಈ ಚಿತ್ರವನ್ನು ಶಿವಕಾರ್ತಿಕೇಯನ್ ಅವರೇ ನಿರ್ಮಿಸಿದ್ದರು.


