ಬಂದರುಗಳ ಭದ್ರತೆ ಸರಕು ನಿರ್ವಹಣೆಯಷ್ಟೇ ಮುಖ್ಯ; ಸೈಬರ್‌ ಬೆದರಿಕೆ ಎದುರಿಸಲು ತಂತ್ರಜ್ಞಾನ ಅಳವಡಿಸಿಕೊಳ್ಳಿ: ಸೋನೋವಾಲ್

2 Min Read
2 Min Read

ನವದೆಹಲಿ: ಭಾರತದ ಬಂದರುಗಳನ್ನು ಕೇವಲ ಸರಕು ನಿರ್ವಹಣೆ ಮತ್ತು ಕಾರ್ಯಾಚರಣೆಯ ದಕ್ಷತೆಯ ಆಧಾರದ ಮೇಲೆ ಮಾತ್ರ ಅಳೆಯಬಾರದು. ಬದಲಾಗುತ್ತಿರುವ ಭದ್ರತಾ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವೂ ಬಂದರುಗಳ ಪ್ರಮುಖ ಮಾನದಂಡವಾಗಬೇಕು ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆದ 2ನೇ ರಾಷ್ಟ್ರೀಯ ಬಂದರು ಭದ್ರತಾ ಸಮ್ಮೇಳನ 2026 ಅನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಸಮುದ್ರ ಭದ್ರತಾ ವ್ಯವಸ್ಥೆಯನ್ನು ತಂತ್ರಜ್ಞಾನ ಆಧಾರಿತವಾಗಿ ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಭಾರತದ ಬಂದರು ಜಾಲ ವಿಸ್ತರಿಸುತ್ತಿದ್ದು, ಜಾಗತಿಕ ವ್ಯಾಪಾರದಲ್ಲಿ ದೇಶದ ಪಾತ್ರವೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಉದಯೋನ್ಮುಖ ಸೈಬರ್‌ ಬೆದರಿಕೆಗಳು ಹಾಗೂ ಭೌಗೋಳಿಕ-ರಾಜಕೀಯ ಸವಾಲುಗಳನ್ನು ಎದುರಿಸಲು ದೃಢ, ಸಮನ್ವಯಗೊಂಡ ಮತ್ತು ಆಧುನಿಕ ತಂತ್ರಜ್ಞಾನ ಹೊಂದಿರುವ ಭದ್ರತಾ ವ್ಯವಸ್ಥೆ ಅಗತ್ಯವಾಗಿದೆ ಎಂದು ಸೋನೋವಾಲ್ ಹೇಳಿದರು.

ಸಮುದ್ರ ವಲಯದ ಎಲ್ಲ ಪಾಲುದಾರರು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು, ವಿವಿಧ ಸಂಸ್ಥೆಗಳ ನಡುವಿನ ಸಮನ್ವಯವನ್ನು ಬಲಪಡಿಸಬೇಕು ಹಾಗೂ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರುವ ಭದ್ರತಾ ವ್ಯವಸ್ಥೆಯನ್ನು ನಿರ್ಮಿಸಬೇಕು ಎಂದು ಸಚಿವರು ಕರೆ ನೀಡಿದರು.

ಸೈಬರ್‌ ದಾಳಿ, ಡ್ರೋನ್‌ ಬೆದರಿಕೆ ಕುರಿತು ಎಚ್ಚರಿಕೆ

ಸೈಬರ್‌ ದಾಳಿಗಳು, ಡ್ರೋನ್‌ಗಳ ಅಕ್ರಮ ಪ್ರವೇಶ, ಪೂರೈಕೆ ಸರಪಳಿಯಲ್ಲಿನ ದುರ್ಬಲತೆಗಳು ಹಾಗೂ ಡಿಜಿಟಲ್ ಮೂಲಸೌಕರ್ಯದ ಮೇಲಿನ ಬೆದರಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಮುದ್ರ ಭದ್ರತೆ ಕೇವಲ ಕಾರ್ಯಾಚರಣೆಯ ಅಗತ್ಯವಲ್ಲ, ಕಾರ್ಯತಂತ್ರದ ಆದ್ಯತೆಯಾಗಿದೆ ಎಂದು ಸೋನೋವಾಲ್ ಹೇಳಿದರು.

“ಸುರಕ್ಷಿತ ಬಂದರುಗಳು ಬಲಿಷ್ಠ ವ್ಯಾಪಾರಕ್ಕೆ ಕಾರಣವಾಗುತ್ತವೆ. ಬಲಿಷ್ಠ ವ್ಯಾಪಾರವು ಬಲವಾದ ಆರ್ಥಿಕತೆಯನ್ನು ನಿರ್ಮಿಸುತ್ತದೆ. ಬಲವಾದ ಆರ್ಥಿಕತೆ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ನೆರವಾಗುತ್ತದೆ” ಎಂದು ಅವರು ಹೇಳಿದರು.

ಭಾರತದ ಬಂದರು ವಲಯದ ಡಿಜಿಟಲೀಕರಣದ ಭಾಗವಾಗಿ ಜಾರಿಗೆ ಬರುತ್ತಿರುವ ಇ-ಸಮುದ್ರ, ಮ್ಯಾರಿಟೈಮ್ ಸಿಂಗಲ್ ವಿಂಡೋ ಮತ್ತು ‘ಒಂದು ರಾಷ್ಟ್ರ, ಒಂದು ಬಂದರು ಪ್ರಕ್ರಿಯೆ’ ಸೇರಿದಂತೆ ವಿವಿಧ ಡಿಜಿಟಲ್ ಉಪಕ್ರಮಗಳನ್ನು ಸಚಿವರು ಪ್ರಸ್ತಾಪಿಸಿದರು.

ಸ್ಮಾರ್ಟ್ ಬಂದರುಗಳತ್ತ ಭಾರತ ಸಾಗುತ್ತಿರುವ ಸಂದರ್ಭದಲ್ಲಿ, ಅದಕ್ಕೆ ಸಮಾನವಾಗಿ ಬಲಿಷ್ಠ ಸೈಬರ್‌ ಭದ್ರತೆ ಮತ್ತು ಅಪಾಯ ನಿರ್ವಹಣಾ ವ್ಯವಸ್ಥೆಗಳನ್ನೂ ಅಭಿವೃದ್ಧಿಪಡಿಸಬೇಕು ಎಂದು ಅವರು ತಿಳಿಸಿದರು.

140ಕ್ಕೂ ಹೆಚ್ಚು ಪ್ರತಿನಿಧಿಗಳ ಭಾಗವಹಿಸುವಿಕೆ

ಸಮ್ಮೇಳನದಲ್ಲಿ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ, ಗೃಹ ಸಚಿವಾಲಯ, ಭಾರತೀಯ ನೌಕಾಪಡೆ, ಭಾರತೀಯ ಕರಾವಳಿ ರಕ್ಷಣಾ ಪಡೆ, ರಾಜ್ಯ ಸಮುದ್ರ ಮಂಡಳಿಗಳು, ಪ್ರಮುಖ ಬಂದರು ಪ್ರಾಧಿಕಾರಗಳು, ಪ್ರಮುಖವಲ್ಲದ ಬಂದರುಗಳು ಹಾಗೂ ಉದ್ಯಮ ವಲಯದ ಪ್ರತಿನಿಧಿಗಳು ಸೇರಿದಂತೆ ಸುಮಾರು 140 ಮಂದಿ ಭಾಗವಹಿಸಿದ್ದರು.

ಭಾರತದ ಸಮುದ್ರ ವಲಯ ಎದುರಿಸುತ್ತಿರುವ ಉದಯೋನ್ಮುಖ ಭದ್ರತಾ ಸವಾಲುಗಳು ಹಾಗೂ ಅವುಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಮಾರ್ಗಗಳ ಕುರಿತು ಸಮ್ಮೇಳನದಲ್ಲಿ ಚರ್ಚೆ ನಡೆಯಿತು.

Share This Article