ನವದೆಹಲಿ: ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಜಾಲತಾಣ ವೇದಿಕೆಗಳು ದೇಶದ ಕಾನೂನುಗಳನ್ನು ಪಾಲಿಸುತ್ತಿವೆಯೇ ಎಂಬುದರ ಕುರಿತು ಕೇಂದ್ರ ಸರ್ಕಾರವು ಮೆಟಾ ಸಂಸ್ಥೆಯ ಜಾಗತಿಕ ತಂಡವನ್ನು ಪ್ರಶ್ನಿಸಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಇಂದು ನವದೆಹಲಿಗೆ ಭೇಟಿ ನೀಡಿರುವ ಮೆಟಾದ ಜಾಗತಿಕ ತಂಡದೊಂದಿಗೆ ಈ ಕುರಿತು ಮತ್ತೊಂದು ಸುತ್ತಿನ ಚರ್ಚೆ ನಡೆಸಿತು. ಭಾರತದಲ್ಲಿ ಕಾರ್ಯನಿರ್ವಹಿಸುವ ಡಿಜಿಟಲ್ ವೇದಿಕೆಗಳು ಕೇವಲ ಅಮೆರಿಕದ ಕಾನೂನುಗಳನ್ನು ಆಧರಿಸಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಭಾರತದ ಕಾನೂನುಗಳು ಮತ್ತು ನಿಯಮಗಳಿಗೆ ಅನುಗುಣವಾಗಿ ತಾಂತ್ರಿಕವಾಗಿ ಯಾವ ರೀತಿಯಲ್ಲಿ ಅನುಸರಣೆ ಮಾಡಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದು ಈ ಚರ್ಚೆಯ ಪ್ರಮುಖ ಉದ್ದೇಶವಾಗಿತ್ತು. ಸಮಾಜ ಮತ್ತು ಕಾನೂನಿನತ್ತ ಎಲ್ಲ ಸಂಸ್ಥೆಗಳಿಗೂ ಇರುವ ಜವಾಬ್ದಾರಿಯಂತೆಯೇ ಸಾಮಾಜಿಕ ಜಾಲತಾಣ ವೇದಿಕೆಗಳಿಗೂ ಜವಾಬ್ದಾರಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆಟಾ ತಂಡವು ಇಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಕೂಡ ಭೇಟಿ ಮಾಡಿತು.
ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳು ಮತ್ತು ಯುವಜನರನ್ನು ಉದ್ದೇಶಿಸಿ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದ ಸಂದೇಶವೊಂದನ್ನು ಮೆಟಾ ವೇದಿಕೆಯಲ್ಲಿ ಸುಮಾರು ಐದು ಗಂಟೆಗಳ ಕಾಲ ನಿರ್ಬಂಧಿಸಿದ ಘಟನೆ ಬಳಿಕ ಕೇಂದ್ರ ಸರ್ಕಾರವು ಮೆಟಾದ ಜಾಗತಿಕ ತಂಡವನ್ನು ಪ್ರಶ್ನಿಸುತ್ತಿರುವುದು ಇದು ಎರಡನೇ ಬಾರಿ.
ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಮೋದಿ ತಮ್ಮ ಪೋಸ್ಟ್‌ನಲ್ಲಿ ಭರವಸೆ ನೀಡಿದ್ದರು. ಆದರೆ, ಆ ಪೋಸ್ಟ್ ಅನ್ನು ಮೆಟಾ ಕೆಲಕಾಲ ನಿರ್ಬಂಧಿಸಿತ್ತು. ಬಳಿಕ ಕೃತಕ ಬುದ್ಧಿಮತ್ತೆ ಆಧಾರಿತ ಸ್ವಯಂಚಾಲಿತ ಕಂಟೆಂಟ್ ಫಿಲ್ಟರ್‌ನಲ್ಲಾದ ತಾಂತ್ರಿಕ ದೋಷದಿಂದ ಪೋಸ್ಟ್ ತೆಗೆದುಹಾಕಲಾಗಿತ್ತು ಎಂದು ಮೆಟಾ ಸ್ಪಷ್ಟಪಡಿಸಿ, ಕ್ಷಮೆಯಾಚಿಸಿತ್ತು.
ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಜಾಲತಾಣ ವೇದಿಕೆಗಳು ಭಾರತೀಯ ಕಾನೂನು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿವೆಯೇ ಎಂಬ ವಿಚಾರ ಮತ್ತೆ ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದೆ.


