ಲಖನೌ: ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಶಾಸಕ ಉಮಾಶಂಕರ್ ಸಿಂಗ್ ಅವರು ದೀರ್ಘಕಾಲದ ಅನಾರೋಗ್ಯದ ಬಳಿಕ ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ಬಲ್ಲಿಯಾ ಜಿಲ್ಲೆಯ ರಸಡಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಉಮಾಶಂಕರ್ ಸಿಂಗ್ ಅವರು 403 ಸದಸ್ಯರ ಉತ್ತರ ಪ್ರದೇಶ ವಿಧಾನಸಭೆಯಲ್ಲಿದ್ದ ಏಕೈಕ ಬಿಎಸ್‌ಪಿ ಶಾಸಕರಾಗಿದ್ದರು.
ಮೆದುಳಿನ ಗಡ್ಡೆಯಿಂದ ಬಳಲುತ್ತಿದ್ದ ಅವರು ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಮುಂದುವರಿದಿದ್ದರೂ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರು ನಿಧನರಾಗಿದ್ದಾರೆ ಎಂದು ತಿಳಿಸಲಾಗಿದೆ.
ಉಮಾಶಂಕರ್ ಸಿಂಗ್ ಅವರ ನಿಧನಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ರಾಜನಾಥ್ ಸಿಂಗ್, ಉಮಾಶಂಕರ್ ಸಿಂಗ್ ಅವರು ಕೇವಲ ಶಾಸಕರಾಗಿ ಮಾತ್ರವಲ್ಲದೆ ಸಂವೇದನಾಶೀಲ ಸಮಾಜ ಸೇವಕರಾಗಿಯೂ ಜನರ ಗೌರವಕ್ಕೆ ಪಾತ್ರರಾಗಿದ್ದರು ಎಂದು ಸ್ಮರಿಸಿದ್ದಾರೆ.
ಪಕ್ಷ ರಾಜಕಾರಣದ ಮಿತಿಗಳನ್ನು ಮೀರಿ ಜನರಿಗಾಗಿ ಕೆಲಸ ಮಾಡುವ ನಂಬಿಕೆಯನ್ನು ಉಮಾಶಂಕರ್ ಸಿಂಗ್ ಹೊಂದಿದ್ದರು. ಅವರ ಸರಳತೆ ಮತ್ತು ಉತ್ತಮ ನಡವಳಿಕೆಯಿಂದಾಗಿ ಎಲ್ಲ ಪಕ್ಷಗಳ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಉಮಾಶಂಕರ್ ಸಿಂಗ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ರಸಡಾ ಕ್ಷೇತ್ರದಲ್ಲಿ ಜನಪರ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದ ಉಮಾಶಂಕರ್ ಸಿಂಗ್ ಅವರ ನಿಧನಕ್ಕೆ ರಾಜಕೀಯ ವಲಯ ಹಾಗೂ ಅವರ ಬೆಂಬಲಿಗರು ಸಂತಾಪ ಸೂಚಿಸಿದ್ದಾರೆ.


