‘ಸಟ್ಲುಜ್’ ವಿವಾದ: ಸಿನಿಮಾ ತೆರವಾದ ಬೆನ್ನಲ್ಲೇ ದಿಲ್ಜಿತ್ ದೋಸಾಂಜ್ ಪ್ರತಿಕ್ರಿಯೆ – ‘ಇದು ನಿಮ್ಮ ಸಿನಿಮಾ, ಹೇಗಾದರೂ ನೋಡಿ’
ಬಿಡುಗಡೆಯಾದ ಕೇವಲ ಎರಡು ದಿನಗಳಲ್ಲೇ ZEE5 ಓಟಿಟಿ ವೇದಿಕೆಯಿಂದ ‘ಸಟ್ಲುಜ್’ (Satluj) ಚಿತ್ರವನ್ನು ತೆಗೆದುಹಾಕಿದ ಬೆಳವಣಿಗೆಗೆ ಚಿತ್ರದ ನಾಯಕ ನಟ ದಿಲ್ಜಿತ್ ದೋಸಾಂಜ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
ಇನ್ಸ್ಟಾಗ್ರಾಂ ಲೈವ್ನಲ್ಲಿ ಅಭಿಮಾನಿಗಳೊಂದಿಗೆ ಮಾತನಾಡಿದ ದಿಲ್ಜಿತ್, ಚಿತ್ರವನ್ನು ಓಟಿಟಿಯಿಂದ ತೆಗೆದುಹಾಕುವ ಸಾಧ್ಯತೆ ಮೊದಲೇ ಗೊತ್ತಿತ್ತು ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ಯಾವುದೇ ಪ್ರಚಾರವಿಲ್ಲದೆ ಚಿತ್ರವನ್ನು ಮೌನವಾಗಿ ಬಿಡುಗಡೆ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
“ಈ ಬೆಳವಣಿಗೆ ನನಗೆ ಅಚ್ಚರಿಯಲ್ಲ. ಸೋಮವಾರ ಕಚೇರಿಗಳು ಆರಂಭವಾದ ಬಳಿಕ ಸಿನಿಮಾ ತೆಗೆದುಹಾಕಲಾಗಬಹುದು ಎಂದುಕೊಂಡಿದ್ದೆ. ಆದರೆ ಭಾನುವಾರವೇ ತೆಗೆದುಹಾಕುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಮೊದಲ ದಿನದಿಂದಲೂ ಇದೇ ರೀತಿಯ ಪರಿಸ್ಥಿತಿ ಇದ್ದ ಕಾರಣ ನಾವು ಚಿತ್ರದ ಪ್ರಚಾರವನ್ನೂ ಮಾಡಲಿಲ್ಲ,” ಎಂದು ದಿಲ್ಜಿತ್ ಹೇಳಿದ್ದಾರೆ.
ಚಿತ್ರವನ್ನು ಅಲ್ಪಾವಧಿಯಾದರೂ ಪ್ರೇಕ್ಷಕರಿಗೆ ತಲುಪಿಸಲು ಸಾಧ್ಯವಾದುದು ಸಂತೋಷದ ವಿಚಾರ ಎಂದು ಹೇಳಿದ ಅವರು, “ನಮ್ಮ ಪರಿಶ್ರಮ ಜನರಿಗೆ ತಲುಪಬೇಕು ಎಂಬುದೇ ನಮ್ಮ ಉದ್ದೇಶವಾಗಿತ್ತು. ಅದು ನೆರವೇರಿದೆ. ಇದು ನಿಮ್ಮ ಸಿನಿಮಾ… ನೀವು ಯಾವ ರೀತಿಯಲ್ಲಿ ಬೇಕಾದರೂ ನೋಡಿ,” ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಚಿತ್ರವನ್ನು ಮುಂಚಿತವಾಗಿ ಪ್ರಚಾರ ಮಾಡಿದ್ದರೆ ಬಿಡುಗಡೆಯೇ ಆಗುತ್ತಿರಲಿಲ್ಲ ಎಂದು ಹೇಳಿದ ದಿಲ್ಜಿತ್, “ಹಠಾತ್ತನೆ ಬಿಡುಗಡೆ ಮಾಡುವುದು ಮಾತ್ರವೇ ನಮ್ಮ ಬಳಿ ಉಳಿದಿದ್ದ ಮಾರ್ಗವಾಗಿತ್ತು. ಇಂದು ಬೆಳಗ್ಗೆ ಗುರುದ್ವಾರದಲ್ಲಿ ಈ ಚಿತ್ರದ ಪ್ರದರ್ಶನ ನಡೆಯುತ್ತಿರುವ ವಿಡಿಯೊವನ್ನೂ ನೋಡಿದೆ,” ಎಂದರು.
ಈ ಹಿಂದೆಯೂ ದಿಲ್ಜಿತ್, “ಚಿತ್ರವನ್ನು ಬೇಗ ನೋಡಿ, ನಂತರ ಓಟಿಟಿಯಿಂದ ತೆಗೆದುಹಾಕಬಹುದು” ಎಂದು ಅಭಿಮಾನಿಗಳಿಗೆ ಸೂಚನೆ ನೀಡಿದ್ದರು.
ಏನಿದು ‘ಸಟ್ಲುಜ್’ ವಿವಾದ?
ಈ ಚಿತ್ರ ಮೊದಲು ‘ಪಂಜಾಬ್ 95’ ಎಂಬ ಹೆಸರಿನಲ್ಲಿ ನಿರ್ಮಾಣವಾಗಿದ್ದು, ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಲ್ರಾ ಅವರ ಜೀವನಾಧಾರಿತ ಕಥೆಯನ್ನು ಒಳಗೊಂಡಿದೆ. ಪಂಜಾಬ್ನಲ್ಲಿ ಉಗ್ರವಾದದ ಅವಧಿಯಲ್ಲಿ ನಡೆದ ಸಾವಿರಾರು ನಕಲಿ ಎನ್ಕೌಂಟರ್ಗಳ ಬಗ್ಗೆ ಬೆಳಕು ಚೆಲ್ಲಿದ ಖಲ್ರಾ ಅವರ ಹೋರಾಟವನ್ನು ಚಿತ್ರದಲ್ಲಿ ಚಿತ್ರಿಸಲಾಗಿದೆ.
2023ರಿಂದಲೇ ಈ ಚಿತ್ರ ಬಿಡುಗಡೆಯ ಹಾದಿಯಲ್ಲಿ ಹಲವು ಅಡೆತಡೆಗಳನ್ನು ಎದುರಿಸುತ್ತಿತ್ತು. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಚಿತ್ರದಲ್ಲಿ 120ಕ್ಕೂ ಹೆಚ್ಚು ಬದಲಾವಣೆಗಳನ್ನು ಸೂಚಿಸಿದ್ದ ಹಿನ್ನೆಲೆಯಲ್ಲಿ ಚಿತ್ರ ವಿವಾದಕ್ಕೆ ಕಾರಣವಾಗಿತ್ತು.
ಕಳೆದ ಶುಕ್ರವಾರ ರಾತ್ರಿ ZEE5ನಲ್ಲಿ ಬಿಡುಗಡೆಯಾದ ಚಿತ್ರ, ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದ ನಡುವೆಯೇ 48 ಗಂಟೆಗಳೊಳಗೆ ವೇದಿಕೆಯಿಂದ ತೆಗೆದುಹಾಕಲಾಯಿತು.
ZEE5 ತನ್ನ ಪ್ರಕಟಣೆಯಲ್ಲಿ, “ಪ್ರಸ್ತುತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ‘ಸಟ್ಲುಜ್’ ಚಿತ್ರವನ್ನು ಭಾರತದಲ್ಲಿ ಮುಂದಿನ ಸೂಚನೆವರೆಗೆ ಸ್ಥಗಿತಗೊಳಿಸಲಾಗಿದೆ. ಕಾನೂನು ಪ್ರಕ್ರಿಯೆಯ ಮೂಲಕ ಸಾಧ್ಯವಾದಷ್ಟು ಬೇಗ ಮತ್ತೆ ಪ್ರೇಕ್ಷಕರಿಗೆ ತಲುಪಿಸಲು ಪ್ರಯತ್ನಿಸುತ್ತೇವೆ” ಎಂದು ತಿಳಿಸಿದೆ.


