ಶಸ್ತ್ರಾಸ್ತ್ರದಿಂದ ಸಮವಸ್ತ್ರದವರೆಗೆ ದೇಶೀಯ ಉತ್ಪಾದನೆಗೆ ಆದ್ಯತೆ: ರಾಜನಾಥ್ ಸಿಂಗ್

1 Min Read
1 Min Read

ನವದೆಹಲಿ: ದೇಶದ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದರ ಜತೆಗೆ ಆಧುನಿಕೀಕರಣಕ್ಕೂ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ನವದೆಹಲಿಯಲ್ಲಿ ಭಾರತೀಯ ಸೇನೆ ಮತ್ತು ಭಾರತೀಯ ಆಹಾರ ನಿಗಮ (ಎಫ್‌ಸಿಐ) ನಡುವೆ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಸ್ತ್ರಾಸ್ತ್ರಗಳು, ತಂತ್ರಜ್ಞಾನ, ಸಮವಸ್ತ್ರ, ಉಪಕರಣಗಳು ಮತ್ತು ತರಬೇತಿ ಸೇರಿದಂತೆ ರಕ್ಷಣಾ ಕ್ಷೇತ್ರದ ವಿವಿಧ ವಲಯಗಳಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಕಳೆದ ಕೆಲವು ವರ್ಷಗಳಿಂದ ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಭಾರತವು ತನ್ನ ರಕ್ಷಣಾ ಅಗತ್ಯಗಳ ಗಮನಾರ್ಹ ಭಾಗವನ್ನು ದೇಶದಲ್ಲಿಯೇ ಉತ್ಪಾದಿಸುವ ಸಾಮರ್ಥ್ಯ ಬೆಳೆಸಿಕೊಂಡಿದೆ ಎಂದು ಅವರು ಹೇಳಿದರು.

ಸೈನಿಕರಿಗೆ ಉತ್ತಮ ಗುಣಮಟ್ಟದ ಆಹಾರ, ಸೂಕ್ತ ಉಪಕರಣಗಳು, ಗುಣಮಟ್ಟದ ತರಬೇತಿ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಅವರ ಮನೋಬಲವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟರು.

ದೇಶದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಸೈನಿಕರ ಕಲ್ಯಾಣಕ್ಕೂ ಆದ್ಯತೆ ನೀಡುವುದು ಅಗತ್ಯ ಎಂಬುದನ್ನು ಅವರು ತಮ್ಮ ಭಾಷಣದಲ್ಲಿ ಒತ್ತಿಹೇಳಿದರು.

Share This Article