ನವದೆಹಲಿ: ರೋಗಿಗಳಿಗೆ ಆರೋಗ್ಯ ಸೇವೆಗಳ ವೆಚ್ಚದ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯುವಂತೆ ಮಾಡಲು, ಎಲ್ಲ ಕ್ಲಿನಿಕಲ್ ಸಂಸ್ಥೆಗಳು ತಾವು ಒದಗಿಸುವ ಸೇವೆಗಳು ಮತ್ತು ಸೌಲಭ್ಯಗಳ ದರಪಟ್ಟಿಯನ್ನು ಎದ್ದು ಕಾಣುವ ಸ್ಥಳಗಳಲ್ಲಿ ಪ್ರದರ್ಶಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ಚಿಕಿತ್ಸೆಯ ವೆಚ್ಚದ ಕುರಿತು ರೋಗಿಗಳು ಸೂಕ್ತ ನಿರ್ಧಾರ ಕೈಗೊಳ್ಳಲು ನೆರವಾಗುವುದು, ಬಿಲ್ಲಿಂಗ್ಗೆ ಸಂಬಂಧಿಸಿದ ವಿವಾದಗಳನ್ನು ತಗ್ಗಿಸುವುದು ಹಾಗೂ ಆರೋಗ್ಯ ಸೇವೆಗಳ ಮೇಲಿನ ವಿಶ್ವಾಸವನ್ನು ಬಲಪಡಿಸುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.
ಈ ಸಂಬಂಧ ಕೇಂದ್ರ ಆರೋಗ್ಯ ಕಾರ್ಯದರ್ಶಿ ಪುಣ್ಯ ಸಲಿಲಾ ಶ್ರೀವಾಸ್ತವ ಅವರು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಆರೋಗ್ಯ ಸೇವೆಗಳ ದರಗಳಲ್ಲಿ ಪಾರದರ್ಶಕತೆ ಇರಬೇಕಾದ ಅಗತ್ಯವನ್ನು ಅವರು ಪತ್ರದಲ್ಲಿ ಒತ್ತಿಹೇಳಿದ್ದಾರೆ.
ಆಸ್ಪತ್ರೆಗಳು ಮತ್ತು ಇತರ ಕ್ಲಿನಿಕಲ್ ಸಂಸ್ಥೆಗಳು ಚಿಕಿತ್ಸಾ ದರಗಳನ್ನು ಸ್ಪಷ್ಟವಾಗಿ ಪ್ರದರ್ಶಿಸುವುದರಿಂದ ರೋಗಿಗಳು ಹಾಗೂ ಅವರ ಕುಟುಂಬದವರಿಗೆ ಚಿಕಿತ್ಸೆಗೆ ತಗಲಬಹುದಾದ ವೆಚ್ಚದ ಅಂದಾಜು ಸಿಗಲಿದೆ. ಇದರಿಂದ ಅವರು ಚಿಕಿತ್ಸೆಗೆ ಸಂಬಂಧಿಸಿದ ನಿರ್ಧಾರಗಳನ್ನು ತಿಳಿವಳಿಕೆಯಿಂದ ಕೈಗೊಳ್ಳುವುದರ ಜತೆಗೆ ವೈದ್ಯಕೀಯ ವೆಚ್ಚಕ್ಕೆ ಅಗತ್ಯವಾದ ಹಣಕಾಸಿನ ಯೋಜನೆಯನ್ನೂ ರೂಪಿಸಬಹುದು ಎಂದು ಅವರು ತಿಳಿಸಿದ್ದಾರೆ.
ಇದಲ್ಲದೆ, ವೈದ್ಯಕೀಯ ಚಿಕಿತ್ಸೆ ಅಥವಾ ಆಯುಷ್ ವೀಸಾದಡಿ ಭಾರತಕ್ಕೆ ಭೇಟಿ ನೀಡುವ ವಿದೇಶಿ ರೋಗಿಗಳಿಗೆ ಅನ್ವಯಿಸುವ ಚಿಕಿತ್ಸಾ ಪ್ಯಾಕೇಜ್ಗಳ ದರಗಳನ್ನೂ ಪಾರದರ್ಶಕವಾಗಿ ಪ್ರದರ್ಶಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ.
ಆರೋಗ್ಯ ಸೇವೆಗಳಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ರೋಗಿಗಳ ಅಗತ್ಯಗಳಿಗೆ ಸ್ಪಂದಿಸುವ ವ್ಯವಸ್ಥೆಯನ್ನು ಬಲಪಡಿಸುವ ಕೇಂದ್ರ ಸರ್ಕಾರದ ಬದ್ಧತೆಯನ್ನು ಈ ಉಪಕ್ರಮ ಪ್ರತಿಬಿಂಬಿಸುತ್ತದೆ. ಚಿಕಿತ್ಸಾ ವೆಚ್ಚದ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯುವುದು ರೋಗಿ ಕೇಂದ್ರಿತ ಆರೋಗ್ಯ ಸೇವೆಯ ಪ್ರಮುಖ ಭಾಗವಾಗಬೇಕು ಎಂಬುದು ಇದರ ಆಶಯವಾಗಿದೆ.


