ಬೆಂಗಳೂರು: ನೀರಿನ ಆಡಳಿತದಲ್ಲಿ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯು ಮಹತ್ವದ ಬದಲಾವಣೆಗೆ ಕಾರಣವಾಗಬಹುದು ಎಂಬುದನ್ನು ಒತ್ತಿಹೇಳುವ ಹೊಸ ಪ್ರಕರಣ ಅಧ್ಯಯನವನ್ನು ಐಐಎಂ ಬೆಂಗಳೂರುನಲ್ಲಿ ಬಿಡುಗಡೆ ಮಾಡಲಾಗಿದೆ.
ಗುಜರಾತ್ ಸೇರಿದಂತೆ ದೇಶದಲ್ಲಿ ಜಲ ಆಡಳಿತ ವ್ಯವಸ್ಥೆ ಹೇಗೆ ರೂಪುಗೊಂಡಿದೆ ಮತ್ತು ಅದರ ಅನುಭವಗಳಿಂದ ಇತರ ರಾಷ್ಟ್ರಗಳು ಯಾವ ಪಾಠಗಳನ್ನು ಕಲಿಯಬಹುದು ಎಂಬುದನ್ನು ಅಧ್ಯಯನ ವಿಶ್ಲೇಷಿಸುತ್ತದೆ. ಜಾಗತಿಕ ದಕ್ಷಿಣ ಭಾಗದ ದೇಶಗಳಲ್ಲಿ ಜಲ ಆಡಳಿತ ಕ್ಷೇತ್ರದಲ್ಲಿ ನೀತಿ ರೂಪಿಸುವವರು ಹಾಗೂ ಅನುಷ್ಠಾನಗೊಳಿಸುವವರಿಗೆ ಈ ಅಧ್ಯಯನ ಮಾರ್ಗದರ್ಶನ ನೀಡುವ ಉದ್ದೇಶ ಹೊಂದಿದೆ.
ಜನರ ಭಾಗವಹಿಸುವಿಕೆಯಿಂದ ಜಲ ನಿರ್ವಹಣೆಗೆ ವೇಗ
ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ ಅಶೋಕ್ ಕುಮಾರ್ ಮೀನಾ ಅಧ್ಯಯನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಜನರ ಪಾಲ್ಗೊಳ್ಳುವಿಕೆ, ಬಲಿಷ್ಠ ಸಂಸ್ಥೆಗಳು, ನಿರಂತರ ಹೂಡಿಕೆ ಮತ್ತು ಗ್ರಾಮ ಪಂಚಾಯಿತಿಗಳ ಮಾಲೀಕತ್ವ ಒಟ್ಟಾಗಿ ಕಾರ್ಯನಿರ್ವಹಿಸಿದರೆ ಜಲ ನಿರ್ವಹಣೆಯಲ್ಲಿ ಪರಿವರ್ತನೆಗೆ ವೇಗ ನೀಡಬಹುದು ಎಂದು ಹೇಳಿದರು.
ನೀರಿನ ಸಮಸ್ಯೆ ಕೇವಲ ಮೂಲಸೌಕರ್ಯ ನಿರ್ಮಾಣಕ್ಕೆ ಸೀಮಿತವಾಗಿಲ್ಲ. ಪರಿಣಾಮಕಾರಿ ಆಡಳಿತ ವ್ಯವಸ್ಥೆ ಮತ್ತು ಸಮುದಾಯದ ಹೊಣೆಗಾರಿಕೆಯೂ ನೀರಿನ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಸಂದೇಶವನ್ನು ಅಧ್ಯಯನ ಮುಂದಿಟ್ಟಿದೆ.
ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಜಲ ಜೀವನ ಮಿಷನ್
ನೀರು ಮತ್ತು ನೈರ್ಮಲ್ಯ ನಿರ್ವಹಣಾ ಸಂಸ್ಥೆಯ ಮೂಲಕ ಜಲ ಜೀವನ ಮಿಷನ್ ರೂಪಿಸುವ ಸಂದರ್ಭದಲ್ಲಿ ಸಮುದಾಯದ ಸಹಭಾಗಿತ್ವಕ್ಕೆ ಆದ್ಯತೆ ನೀಡಲಾಗಿತ್ತು ಎಂದು ಅಶೋಕ್ ಕುಮಾರ್ ಮೀನಾ ವಿವರಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸ್ಥಳೀಯ ಮಟ್ಟದಲ್ಲಿ ಜನರು ಮತ್ತು ಗ್ರಾಮ ಪಂಚಾಯಿತಿಗಳ ಪಾತ್ರವನ್ನು ಬಲಪಡಿಸುವುದು ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಆಸ್ತಿ ನಿರ್ಮಾಣದಿಂದ ದೀರ್ಘಕಾಲೀನ ಸೇವೆಗೆ ಜಲ ಜೀವನ ಮಿಷನ್ 2.0
ಜಲ ಜೀವನ ಮಿಷನ್ 2.0 ಕುರಿತು ಮಾತನಾಡಿದ ಮೀನಾ, ಯೋಜನೆಯ ಗಮನ ಈಗ ಕೇವಲ ನೀರಿನ ಮೂಲಸೌಕರ್ಯ ಮತ್ತು ಆಸ್ತಿಗಳ ನಿರ್ಮಾಣದಿಂದ ದೀರ್ಘಕಾಲೀನ ಹಾಗೂ ನಿರಂತರ ಸೇವೆ ಒದಗಿಸುವತ್ತ ಬದಲಾಗುತ್ತಿದೆ ಎಂದು ಹೇಳಿದರು.
ಇದರ ಭಾಗವಾಗಿ ಗ್ರಾಮ ಪಂಚಾಯಿತಿಗಳು ಸ್ಥಳೀಯ ಮಟ್ಟದ ಸಣ್ಣ ನೀರು ಸರಬರಾಜು ವ್ಯವಸ್ಥೆಗಳನ್ನು ನಿರ್ವಹಿಸಲಿವೆ. ಇವುಗಳನ್ನು ಸರ್ಕಾರಿ ಅನುದಾನ ಮತ್ತು ಬಳಕೆದಾರರಿಂದ ಸಂಗ್ರಹಿಸುವ ಶುಲ್ಕದ ಮೂಲಕ ದೀರ್ಘಕಾಲೀನವಾಗಿ ನಿರ್ವಹಿಸುವ ಉದ್ದೇಶ ಹೊಂದಲಾಗಿದೆ.
ಜಾಗತಿಕ ದಕ್ಷಿಣಕ್ಕೆ ಭಾರತದ ಜಲ ಆಡಳಿತದ ಪಾಠ
ಐಐಎಂ ಬೆಂಗಳೂರು ಬಿಡುಗಡೆ ಮಾಡಿರುವ ಅಧ್ಯಯನವು ಗುಜರಾತ್ನ ಅನುಭವದಿಂದ ದೇಶದ ಇತರ ಭಾಗಗಳಿಗೆ ಜಲ ಆಡಳಿತದ ಮಾದರಿಗಳು ಹೇಗೆ ವಿಸ್ತರಿಸಿದವು ಎಂಬುದನ್ನು ಪರಿಶೀಲಿಸುತ್ತದೆ. ಅಧ್ಯಯನದ ಸಹ-ಲೇಖಕರಾಗಿ ಜಾರ್ಜ್ ಮೇಸನ್ ವಿಶ್ವವಿದ್ಯಾಲಯದ ಡಾ. ಡೇನಿಯಲ್ ಸ್ಮಿತ್, ಕೌನ್ಸಿಲ್ ಆಫ್ ಎನರ್ಜಿ, ಎನ್ವಿರಾನ್ಮೆಂಟ್ ಆ್ಯಂಡ್ ವಾಟರ್ನ ಡಾ. ನಿತಿನ್ ಬಸ್ಸಿ ಸೇರಿದಂತೆ ತಜ್ಞರು ಭಾಗಿಯಾಗಿದ್ದಾರೆ.


