ಹೆದ್ದಾರಿ ಕಾಮಗಾರಿಗಳ ಗುಣಮಟ್ಟಕ್ಕೆ NHAI ಬ್ರೇಕ್‌ಥ್ರೂ ಕ್ರಮ: 17 ಯೋಜನೆಗಳಿಗೆ ವಿಶೇಷ ತಪಾಸಣೆ

2 Min Read
2 Min Read

ನವದೆಹಲಿ: ದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಗುಣಮಟ್ಟವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವಿಶೇಷ ಗುಣಮಟ್ಟ ಪರಿಶೀಲನೆಗೆ ಮುಂದಾಗಿದೆ. ಅಂದಾಜು ಯೋಜನಾ ವೆಚ್ಚಕ್ಕಿಂತ ಶೇ.15ಕ್ಕೂ ಹೆಚ್ಚು ಕಡಿಮೆ ಮೊತ್ತಕ್ಕೆ ಬಿಡ್ ಆಗಿರುವ 17 ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಈ ವಿಶೇಷ ತಪಾಸಣೆಗೆ ಆಯ್ಕೆ ಮಾಡಲಾಗಿದೆ.

ಈ ತಪಾಸಣೆಗಳು NHAI ನಡೆಸುತ್ತಿರುವ ಸಾಮಾನ್ಯ ಗುಣಮಟ್ಟ ಪರಿಶೀಲನೆಗಳಿಗೆ ಹೆಚ್ಚುವರಿಯಾಗಿದ್ದು, ಕಾಮಗಾರಿ ಹಂತದಲ್ಲಿಯೇ ಗುಣಮಟ್ಟದ ಸಮಸ್ಯೆಗಳನ್ನು ಗುರುತಿಸಿ, ಅಗತ್ಯವಿದ್ದಲ್ಲಿ ತಕ್ಷಣವೇ ತಿದ್ದುಪಡಿ ಕ್ರಮ ಕೈಗೊಳ್ಳುವುದು ಇದರ ಉದ್ದೇಶವಾಗಿದೆ.

39 ಅನುಭವಿ ಎಂಜಿನಿಯರ್‌ಗಳ ತಂಡ

ವಿಶೇಷ ಪರಿಶೀಲನೆಗಾಗಿ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ 39 ಅನುಭವಿ ಹಾಗೂ ನಿವೃತ್ತ ಎಂಜಿನಿಯರ್‌ಗಳ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ರೈಲ್ವೆ, ರಕ್ಷಣಾ ಸಚಿವಾಲಯ ಹಾಗೂ ವಿವಿಧ ರಾಜ್ಯಗಳ ಲೋಕೋಪಯೋಗಿ ಇಲಾಖೆಗಳ ಅನುಭವಿ ಎಂಜಿನಿಯರ್‌ಗಳು ಈ ವ್ಯವಸ್ಥೆಯ ಭಾಗವಾಗಿದ್ದಾರೆ. ತಾಂತ್ರಿಕ ತಜ್ಞರೂ ಪರಿಶೀಲನಾ ತಂಡಗಳಿಗೆ ಅಗತ್ಯ ನೆರವು ನೀಡಲಿದ್ದಾರೆ.

ಡಿಸೆಂಬರ್ ವೇಳೆಗೆ ಮೊದಲ ಹಂತದ ಪರಿಶೀಲನೆ

ಮೊದಲ ಹಂತದ ವಿಶೇಷ ತಪಾಸಣೆಯನ್ನು 2026ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಇದಾದ ಆರು ತಿಂಗಳ ಬಳಿಕ ಇದೇ ಯೋಜನೆಗಳನ್ನು ಮತ್ತೊಂದು ತಂಡದ ಮೂಲಕ ಮರುಪರಿಶೀಲಿಸಲಾಗುತ್ತದೆ. ಮೊದಲ ತಂಡದಿಂದ ಭಿನ್ನವಾಗಿರುವ ತಜ್ಞರ ತಂಡವನ್ನು ಬಳಸುವ ಮೂಲಕ ಕಾಮಗಾರಿಯ ಗುಣಮಟ್ಟ ಹಾಗೂ ನಿಗದಿತ ನಿರ್ಮಾಣ ಮಾನದಂಡಗಳ ಪಾಲನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಪರಿಶೀಲಿಸಲು NHAI ಉದ್ದೇಶಿಸಿದೆ.

ಯಾವೆಲ್ಲ ಅಂಶಗಳ ಪರಿಶೀಲನೆ?

ಪರಿಶೀಲನಾ ತಂಡಗಳು ಅನುಮೋದಿತ ವಿನ್ಯಾಸ, ತಾಂತ್ರಿಕ ನಿರ್ದಿಷ್ಟತೆಗಳು, ಗುತ್ತಿಗೆ ಷರತ್ತುಗಳು ಹಾಗೂ ಯೋಜನೆಗೆ ನಿಗದಿಪಡಿಸಿರುವ ಗುಣಮಟ್ಟದ ಯೋಜನೆಗೆ ಅನುಗುಣವಾಗಿ ಕಾಮಗಾರಿ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಲಿವೆ.

ಇದರ ಜೊತೆಗೆ ನಿರ್ಮಾಣಕ್ಕೆ ಬಳಸಲಾಗುತ್ತಿರುವ ಕಚ್ಚಾ ವಸ್ತುಗಳ ಗುಣಮಟ್ಟ, ಕಾಮಗಾರಿಯ ನೈಪುಣ್ಯ, ನಿರ್ಮಾಣ ವಿಧಾನಗಳು, ಮಾದರಿ ಸಂಗ್ರಹಣೆ ಮತ್ತು ಪರೀಕ್ಷಾ ದಾಖಲೆಗಳು ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸಲಾಗುತ್ತದೆ.

ಅಗತ್ಯವಿರುವ ಕಡೆಗಳಲ್ಲಿ ರಸ್ತೆ ಸುರಕ್ಷತೆ, ಸಂಚಾರ ನಿರ್ವಹಣೆ ಮತ್ತು ಪರಿಸರ ಸುರಕ್ಷತಾ ಕ್ರಮಗಳನ್ನೂ ತಪಾಸಣೆಯ ವ್ಯಾಪ್ತಿಗೆ ತರಲಾಗುತ್ತದೆ. ಯಾವುದೇ ಕೊರತೆ ಅಥವಾ ಲೋಪ ಪತ್ತೆಯಾದರೆ, ಸಂಬಂಧಿತ ಗುತ್ತಿಗೆ ಷರತ್ತುಗಳನ್ವಯ ತಿದ್ದುಪಡಿ ಕ್ರಮ ಕೈಗೊಳ್ಳಲಾಗುತ್ತದೆ.

9 ರಾಜ್ಯಗಳ ಯೋಜನೆಗಳು ಪರಿಶೀಲನೆಗೆ

ವಿಶೇಷ ತಪಾಸಣೆಗೆ ಆಯ್ಕೆಯಾಗಿರುವ 17 ಯೋಜನೆಗಳು ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್‌ಗಢ, ಆಂಧ್ರಪ್ರದೇಶ, ತಮಿಳುನಾಡು, ಪಂಜಾಬ್, ಹರಿಯಾಣ, ಗುಜರಾತ್ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಹರಡಿವೆ.

ಇವುಗಳಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಗ್ರೀನ್‌ಫೀಲ್ಡ್ ಹಾಗೂ ಪ್ರವೇಶ ನಿಯಂತ್ರಿತ ಹೆದ್ದಾರಿ ಮಾರ್ಗಗಳು, ಬೈಪಾಸ್‌ಗಳು ಮತ್ತು ನಾಲ್ಕು ಹಾಗೂ ಆರು ಪಥಗಳಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಕಾಮಗಾರಿಗಳು ಸೇರಿವೆ.

ಸಾಮಾನ್ಯ ಸಮಸ್ಯೆಗಳನ್ನು ಗುರುತಿಸಲು ಸಹಾಯಕ

ಈ ವಿಶೇಷ ಪರಿಶೀಲನೆಯ ಮೂಲಕ ಒಂದೊಂದು ಯೋಜನೆಯಲ್ಲಿನ ಲೋಪಗಳನ್ನು ಪತ್ತೆಹಚ್ಚುವುದರ ಜೊತೆಗೆ, ವಿವಿಧ ಹೆದ್ದಾರಿ ಕಾಮಗಾರಿಗಳಲ್ಲಿ ಪದೇಪದೇ ಕಂಡುಬರುವ ಸಾಮಾನ್ಯ ಗುಣಮಟ್ಟದ ಸಮಸ್ಯೆಗಳನ್ನು ಗುರುತಿಸುವುದು, ನಿರ್ಮಾಣ ವಿಧಾನಗಳನ್ನು ಸುಧಾರಿಸುವುದು ಮತ್ತು ಗುತ್ತಿಗೆದಾರರು, ಸಲಹೆಗಾರರು ಹಾಗೂ ಇತರ ಯೋಜನಾ ಪಾಲುದಾರರ ಹೊಣೆಗಾರಿಕೆಯನ್ನು ಬಲಪಡಿಸುವುದು NHAIಯ ಉದ್ದೇಶವಾಗಿದೆ.

Share This Article