ಚೀನಾಗೆ ಸೋಲುಣಿಸಿ ಚಿನ್ನ ಗೆದ್ದ ಭಾರತ; ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ಬಿಲ್ಲುಗಾರರ ಕಮಾಲ್

1 Min Read
1 Min Read

ಜಪಾನ್: 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಮಹಿಳಾ ಕಂಪೌಂಡ್ ಆರ್ಚರಿ ತಂಡ ಚಿನ್ನದ ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದೆ. ಜಪಾನ್‌ನ ಒಕಾಜಾಕಿ ಚುವೊ ಸೋಗೊ ಪಾರ್ಕ್‌ನಲ್ಲಿ ನಡೆದ ಫೈನಲ್‌ನಲ್ಲಿ ಭಾರತ 238–234 ಅಂಕಗಳಿಂದ ಚೀನಾವನ್ನು ಮಣಿಸಿತು.

ಜ್ಯೋತಿ ಸುರೇಖಾ ವೆನ್ನಂ, ಚಿಕಿಥಾ ತನಿಪಾರ್ತಿ ಮತ್ತು ಪೃಥಿಕಾ ಪ್ರದೀಪ್ ಅವರನ್ನು ಒಳಗೊಂಡ ಭಾರತ ತಂಡ ಫೈನಲ್‌ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡಿ ಚೀನಾದ ಸವಾಲನ್ನು ಮೆಟ್ಟಿನಿಂತಿತು. ಈ ಗೆಲುವಿನೊಂದಿಗೆ ಭಾರತ ಮಹಿಳಾ ಕಂಪೌಂಡ್ ತಂಡದ ವಿಭಾಗದಲ್ಲಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಂಡಿದೆ.

ಸೆಮಿಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಕೊರಿಯಾವನ್ನು 234–233 ಅಂಕಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಅದಕ್ಕೂ ಮುನ್ನ ಕ್ವಾರ್ಟರ್‌ಫೈನಲ್‌ನಲ್ಲಿ ಕಜಕಿಸ್ತಾನವನ್ನು 233–230 ಅಂಕಗಳಿಂದ ಮಣಿಸಿತ್ತು.

ವಿಶೇಷವೆಂದರೆ, ಜ್ಯೋತಿ ಸುರೇಖಾ ವೆನ್ನಂ ಈಗಾಗಲೇ ಏಷ್ಯನ್ ಗೇಮ್ಸ್‌ನಲ್ಲಿ ಹಲವು ಚಿನ್ನದ ಪದಕಗಳನ್ನು ಗೆದ್ದಿರುವ ಅನುಭವಿ ಬಿಲ್ಲುಗಾರ್ತಿಯಾಗಿದ್ದು, ಚಿಕಿಥಾ ತನಿಪಾರ್ತಿ ಅರ್ಹತಾ ಸುತ್ತಿನಲ್ಲಿ 705 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದರು.

ಈ ಚಿನ್ನದ ಪದಕದೊಂದಿಗೆ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಪದಕ ಬೇಟೆ ಮತ್ತಷ್ಟು ಬಲಗೊಂಡಿದೆ. ಮಹಿಳಾ ಕಂಪೌಂಡ್ ತಂಡದ ಈ ಸಾಧನೆಯು ಏಷ್ಯನ್ ಮಟ್ಟದಲ್ಲಿ ಭಾರತೀಯ ಬಿಲ್ಲುಗಾರಿಕೆಯ ನಿರಂತರ ಯಶಸ್ಸಿಗೆ ಮತ್ತೊಂದು ಸೇರ್ಪಡೆಯಾಗಿದೆ.

Share This Article