ನವದೆಹಲಿ: ದೇಶದಲ್ಲಿ ಇಂಧನ ಕಲಬೆರಕೆ ಅಥವಾ ಇಂಧನ ಮಾಲಿನ್ಯವಾಗುತ್ತಿದೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆರೋಪಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಇಂಧನದ ಗುಣಮಟ್ಟವನ್ನು ತೈಲ ಮಾರುಕಟ್ಟೆ ಕಂಪನಿಗಳು (OMCs) ನಿಯಮಿತವಾಗಿ ಪರಿಶೀಲಿಸುತ್ತಿವೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.
ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಸಚಿವಾಲಯವು, ಇಂಧನದ ಗುಣಮಟ್ಟ ಖಚಿತಪಡಿಸಿಕೊಳ್ಳಲು ಈಗಾಗಲೇ ಅತ್ಯಾಧುನಿಕ ಹಾಗೂ ಸಮಗ್ರ ಪರೀಕ್ಷಾ ವ್ಯವಸ್ಥೆಗಳು ಜಾರಿಯಲ್ಲಿವೆ ಎಂದು ತಿಳಿಸಿದೆ. ಇದರ ಜೊತೆಗೆ ಹೆಚ್ಚುವರಿ ತಪಾಸಣೆಗಳನ್ನೂ ಕೈಗೊಳ್ಳಲಾಗಿದ್ದು, ದೇಶಾದ್ಯಂತ 87,000ಕ್ಕೂ ಹೆಚ್ಚು ಇಂಧನ ಕೇಂದ್ರಗಳಲ್ಲಿ ದಿನಕ್ಕೆ ಸುಮಾರು 8ರಿಂದ 12 ಬಾರಿ ನೀರು ಇಂಧನಕ್ಕೆ ಸೇರ್ಪಡೆಯಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದೆ.
2 ಸಾವಿರಕ್ಕೂ ಹೆಚ್ಚು ಮಾದರಿಗಳ ಪರೀಕ್ಷೆ
ಇಂಧನದಲ್ಲಿ ಕ್ಲೋರೈಡ್ ಮತ್ತು ಸಲ್ಫೈಡ್ ಅಂಶಗಳಿರುವುದನ್ನು ಪತ್ತೆಹಚ್ಚಲು 2,000ಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪರೀಕ್ಷೆಯಲ್ಲಿ ದೇಶಾದ್ಯಂತ ಇದುವರೆಗೆ ಕೇವಲ ಎರಡು ಪ್ರಕರಣಗಳಲ್ಲಿ ಕ್ಲೋರೈಡ್ ಮಾಲಿನ್ಯ ಪತ್ತೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಮಾಲಿನ್ಯ ಪತ್ತೆಯಾದ ಎರಡೂ ಇಂಧನ ಕೇಂದ್ರಗಳಲ್ಲಿ ತಕ್ಷಣವೇ ಇಂಧನ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಯಾವುದೇ ಚಿಲ್ಲರೆ ಇಂಧನ ಕೇಂದ್ರದಲ್ಲಿ ಕಲಬೆರಕೆ ಅಥವಾ ಮಾಲಿನ್ಯ ಪತ್ತೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ಸಂಪೂರ್ಣ ಪೂರೈಕೆ ಸರಪಳಿ ಮೇಲೆ ನಿಗಾ
ಇಂಧನ ಪೂರೈಕೆ ಸರಪಳಿಯ ಯಾವುದೇ ಹಂತದಲ್ಲಿ ಸಂಭವಿಸಬಹುದಾದ ಮಾಲಿನ್ಯವನ್ನು ಮುಂಚಿತವಾಗಿ ಪತ್ತೆಹಚ್ಚಲು ಅಗತ್ಯವಿರುವ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುವಂತೆ ತೈಲ ಮಾರುಕಟ್ಟೆ ಕಂಪನಿಗಳಿಗೆ ಸೂಚಿಸಲಾಗಿದೆ.
ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇಂಧನ ಕಲಬೆರಕೆ ಕುರಿತ ಮಾಹಿತಿಯನ್ನು ಪರಿಶೀಲಿಸದೆ ನಂಬಬಾರದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.


