ನವದೆಹಲಿ: ರೈಲು ಪ್ರಯಾಣಿಕರಿಗೆ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಇನ್ನಷ್ಟು ಸರಳ, ವೇಗವಾದ ಮತ್ತು ಬಳಕೆದಾರ ಸ್ನೇಹಿಯಾಗಿಸಲು ರೈಲ್ವೆ ಸಚಿವಾಲಯವು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಯ ಹೊಸ ಬೀಟಾ (Beta) ವೆಬ್ಸೈಟ್ ಅನ್ನು ಬಿಡುಗಡೆ ಮಾಡಿದೆ.
ಹೊಸ ಬೀಟಾ ಆವೃತ್ತಿಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನಾಲ್ಕು ಪ್ರಮುಖ ಬದಲಾವಣೆಗಳನ್ನು ಪರಿಚಯಿಸಲಾಗಿದೆ. ಮೊದಲನೆಯದಾಗಿ, ಅನಗತ್ಯ ಕ್ಯಾಪ್ಚಾ (Captcha), ಪಾಪ್-ಅಪ್ಗಳು, ಮಿನುಗುವ ಗ್ರಾಫಿಕ್ಸ್ ಹಾಗೂ ಗಮನ ಬೇರೆಡೆ ಸೆಳೆಯುವ ಅಂಶಗಳನ್ನು ತೆಗೆದುಹಾಕಲಾಗಿದೆ. ಇದರಿಂದ ವೆಬ್ಸೈಟ್ ಬಳಸುವುದು ಹೆಚ್ಚು ಸುಲಭವಾಗಲಿದೆ.
ಎರಡನೆಯದಾಗಿ, ಪ್ರಯಾಣಿಕರು ಒಂದೇ ಪರದೆಯಲ್ಲಿ ಎಲ್ಲಾ ವರ್ಗಗಳ ಆಸನ ಲಭ್ಯತೆ ಪರಿಶೀಲಿಸಬಹುದು. ಮೂರನೆಯದಾಗಿ, ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯ ಹಂತಗಳನ್ನು ಕಡಿಮೆಗೊಳಿಸಿರುವುದರಿಂದ ವೇಗವಾದ ಚೆಕ್ಔಟ್ ವ್ಯವಸ್ಥೆ ಕಲ್ಪಿಸಲಾಗಿದೆ. ನಾಲ್ಕನೆಯದಾಗಿ, ಪ್ರಯಾಣಿಕರ ವಿವರಗಳನ್ನು ವೆಬ್ಸೈಟ್ ಸುರಕ್ಷಿತವಾಗಿ ಸಂಗ್ರಹಿಸಿಡುವುದರಿಂದ ಮುಂದಿನ ಬಾರಿ ಟಿಕೆಟ್ ಬುಕ್ ಮಾಡುವಾಗ ಮಾಹಿತಿಯನ್ನು ಮರು ನಮೂದಿಸುವ ಅಗತ್ಯ ಇರುವುದಿಲ್ಲ.
ಹೊಸ ಬೀಟಾ ವೆಬ್ಸೈಟ್ ಅನ್ನು https://www.irctc.co.in/eticket/ ಮೂಲಕ ಬಳಸಬಹುದು. ಅಲ್ಲದೆ, ಈಗಿರುವ IRCTC ವೆಬ್ಸೈಟ್ನ ಮುಖಪುಟದಲ್ಲಿಯೂ ಹೊಸ ಬೀಟಾ ಆವೃತ್ತಿಗೆ ಪ್ರತ್ಯೇಕ ಲಿಂಕ್ ಒದಗಿಸಲಾಗಿದೆ. ವೆಬ್ಸೈಟ್ನ ಹೊಸ ವೈಶಿಷ್ಟ್ಯಗಳ ಕುರಿತು ಪ್ರಯಾಣಿಕರು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡುವಂತೆ ರೈಲ್ವೆ ಸಚಿವಾಲಯ ಮನವಿ ಮಾಡಿದೆ.
IRCTC ವೆಬ್ಸೈಟ್ ಅನ್ನು ಮೊದಲ ಬಾರಿಗೆ 2002ರಲ್ಲಿ ಆರಂಭಿಸಲಾಗಿತ್ತು. ಪ್ರಸ್ತುತ ಪ್ರತಿದಿನ ಸರಾಸರಿ 14.5 ಲಕ್ಷಕ್ಕೂ ಹೆಚ್ಚು ರೈಲು ಟಿಕೆಟ್ಗಳು ಈ ಪೋರ್ಟಲ್ ಮೂಲಕ ಬುಕ್ ಆಗುತ್ತಿವೆ. ಕಳೆದ ಕೆಲವು ವರ್ಷಗಳಿಂದ ವೆಬ್ಸೈಟ್ನ ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹಲವು ದೂರುಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ, ಬಳಕೆದಾರರ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಈ ಹೊಸ ಬೀಟಾ ಆವೃತ್ತಿಯನ್ನು ಪರಿಚಯಿಸಲಾಗಿದೆ. ಪ್ರಯಾಣಿಕರಿಂದ ಬರುವ ಸಲಹೆಗಳ ಆಧಾರದ ಮೇಲೆ ಮುಂದಿನ ಆವೃತ್ತಿಗಳಲ್ಲಿ ಇನ್ನಷ್ಟು ಸುಧಾರಣೆಗಳನ್ನು ಅಳವಡಿಸಲು IRCTC ಯೋಜಿಸಿದೆ.


