ಇಂಧನ ರಫ್ತು ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಪರಿಷ್ಕರಣೆ: ಡೀಸೆಲ್, ಎಟಿಎಫ್‌ಗೆ ಹೆಚ್ಚಳ, ಪೆಟ್ರೋಲ್‌ಗೆ ಇಳಿಕೆ

1 Min Read
1 Min Read

ನವದೆಹಲಿ: ಕೇಂದ್ರ ಸರ್ಕಾರವು ತನ್ನ ಪಾಕ್ಷಿಕ (ಪ್ರತಿ 15 ದಿನಗಳಿಗೊಮ್ಮೆ) ಪರಿಶೀಲನೆಯ ಭಾಗವಾಗಿ ಪೆಟ್ರೋಲ್, ಡೀಸೆಲ್ ಹಾಗೂ ಏವಿಯೇಷನ್ ಟರ್ಬೈನ್ ಇಂಧನ (ATF) ರಫ್ತಿನ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (Special Additional Excise Duty – SAED) ದರಗಳನ್ನು ಪರಿಷ್ಕರಿಸಿದೆ.

ಹಣಕಾಸು ಸಚಿವಾಲಯ ಹೊರಡಿಸಿರುವ ಹೊಸ ಅಧಿಸೂಚನೆಯ ಪ್ರಕಾರ, ಡೀಸೆಲ್ ರಫ್ತಿನ ಮೇಲಿನ ಸುಂಕವನ್ನು ಪ್ರತಿ ಲೀಟರ್‌ಗೆ ₹15.50ಕ್ಕೆ ಹೆಚ್ಚಿಸಲಾಗಿದೆ. ಇದೇ ರೀತಿ, ಎಟಿಎಫ್ (ATF) ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ ₹14.50ಕ್ಕೆ ಏರಿಸಲಾಗಿದೆ.

ಇನ್ನೊಂದೆಡೆ, ಪೆಟ್ರೋಲ್ ರಫ್ತಿನ ಮೇಲಿನ ಸುಂಕವನ್ನು ಪ್ರತಿ ಲೀಟರ್‌ಗೆ ₹2.50ಕ್ಕೆ ಇಳಿಕೆ ಮಾಡಲಾಗಿದೆ. ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ.

ಆದರೆ, ದೇಶೀಯ ಬಳಕೆಗಾಗಿ ಮಾರಾಟವಾಗುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಸಮರ್ಪಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ವರ್ಷದ ಮಾರ್ಚ್ 27ರಿಂದ ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್ ರಫ್ತು ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಜಾರಿಗೆ ತರಲಾಗಿತ್ತು.

ಈ ಸುಂಕದ ದರಗಳನ್ನು ಪ್ರತಿ ಹದಿನೈದು ದಿನಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ. ಕಳೆದ ಪರಿಷ್ಕೃತ ದರಗಳು ಈ ತಿಂಗಳ 1ರಿಂದ ಜಾರಿಯಾಗಿದ್ದವು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ಹಾಗೂ ಎಟಿಎಫ್‌ನ ಸರಾಸರಿ ಬೆಲೆಗಳನ್ನು ಆಧರಿಸಿ ಹೊಸ ಸುಂಕದ ದರಗಳನ್ನು ನಿರ್ಧರಿಸಲಾಗುತ್ತದೆ.

Share This Article