ಕನ್ನಡ ಚಿತ್ರರಂಗದ ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿ (AVR) ಅವರು ಹೊಸ ಡಿಜಿಟಲ್ ಪ್ರಯತ್ನದ ಮೂಲಕ ಗಮನ ಸೆಳೆದಿದ್ದಾರೆ. ಅವರು ಈಗ ಅಧಿಕೃತವಾಗಿ AVR Cine-Max ಎಂಬ ಹೊಸ ಕನ್ನಡ ಓಟಿಟಿ ವೇದಿಕೆಯನ್ನು ಆರಂಭಿಸಿದ್ದಾರೆ.
ಈ ಮೊದಲು AVR Productions ಬ್ಯಾನರ್ ಅಡಿಯಲ್ಲಿ 8 (ಸುಜಯ್ ಶಾಸ್ತ್ರಿ ನಿರ್ದೇಶನ, ಅನುರಾಗ್ ಕಶ್ಯಪ್ ಅಭಿನಯ) ಮತ್ತು Richie Rich (ಸಿಂಪಲ್ ಸುನಿ ನಿರ್ದೇಶನ, ಕಾರ್ತಿಕ್ ಮಹೇಶ್ ನಟನೆಯ) ಚಿತ್ರಗಳನ್ನು ನಿರ್ಮಿಸಿದ್ದ AVR ಇದೀಗ ಡಿಜಿಟಲ್ ಜಗತ್ತಿಗೆ ಪ್ರವೇಶಿಸಿದ್ದಾರೆ.
ಈ OTT ವೇದಿಕೆಯ ಅಧಿಕೃತ ಉದ್ಘಾಟನೆ ಭವ್ಯ ಸಮಾರಂಭದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿದ್ದರು. ವೇದಿಕೆಯ ನಿರ್ವಹಣೆಯ ಜವಾಬ್ದಾರಿಯನ್ನು ನಟ–ನಿರ್ದೇಶಕ ಅವಿನಾಶ್ ದಿವಾಕರ್ ಶೃಂಗೇರಿ ಮತ್ತು ಹಿರಿಯ ನಟ ನಾರಸಿಂಹರಾಜು ಅವರ ಮೊಮ್ಮಗ ನೋಡಿಕೊಳ್ಳುತ್ತಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷೆ ಡಾ. ಜಯಮಾಲಾ ಸೇರಿದಂತೆ ನಿರ್ದೇಶಕರುಗಳಾದ ಟಿ.ಎಸ್. ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ಟಿ.ಎನ್. ಸೀತಾರಾಮ್, ಪಿ. ಶೇಷಾದ್ರಿ, ಶಶಾಂಕ್ ಮತ್ತು ನಾಗಣ್ಣ ಸೇರಿದಂತೆ ಹಲವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಜಯಮಾಲಾ, “ಈ ಹೊಸ OTT ವೇದಿಕೆ ಕನ್ನಡ ಚಿತ್ರರಂಗಕ್ಕೆ ದೊಡ್ಡ ಅವಕಾಶಗಳನ್ನು ನೀಡಲಿದೆ. ಕನ್ನಡ ಕಂಟೆಂಟ್‌ಗಾಗಿ ಇದು ಶಕ್ತಿಶಾಲಿ ವೇದಿಕೆಯಾಗಿ ಬೆಳೆಯಲಿ” ಎಂದು ಆಶಿಸಿದರು.
‘AVR Cine-Max’ ಅನ್ನು “ಕನ್ನಡಿಗರಿಂದ ಕನ್ನಡಿಗರಿಗಾಗಿ” ಎಂಬ ಧ್ಯೇಯದೊಂದಿಗೆ ರೂಪಿಸಲಾಗಿದೆ. ಈಗಾಗಲೇ ಈ ವೇದಿಕೆಯಲ್ಲಿ 750ಕ್ಕೂ ಹೆಚ್ಚು ಚಿತ್ರಗಳು ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಮೂಲ ವೆಬ್ ಸೀರೀಸ್, ರಿಯಾಲಿಟಿ ಶೋಗಳು, ಸಂಗೀತ ಕಾರ್ಯಕ್ರಮಗಳು, ಕ್ರೀಡೆ ಹಾಗೂ ಲೈವ್ ಈವೆಂಟ್‌ಗಳನ್ನೂ ಒಳಗೊಂಡು ವಿಸ್ತರಣೆ ಮಾಡುವ ಯೋಜನೆ ಇದೆ.
ಈ ಕುರಿತು ಮಾತನಾಡಿದ ಸಂಸ್ಥಾಪಕ ಅರವಿಂದ್, “ಕನ್ನಡ ಸಿನಿಮಾ ಮತ್ತು ಕ್ರಿಯೇಟಿವ್ ಕಂಟೆಂಟ್ ಅನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸುವ ಉದ್ದೇಶದಿಂದ ಈ ವೇದಿಕೆಯನ್ನು ಆರಂಭಿಸಿದ್ದೇವೆ. ಸೃಜನಶೀಲರಿಗೆ ಸರಿಯಾದ ವೇದಿಕೆ ನೀಡುವುದು ನಮ್ಮ ಗುರಿ,” ಎಂದು ತಿಳಿಸಿದ್ದಾರೆ.
ಇದೇ ವೇಳೆ ನಿರ್ದೇಶಕ ರವಿ ಶ್ರೀವತ್ಸ ಅವರ Gang of UK ವೆಬ್ ಸೀರೀಸ್ ಆಗಿ ಸ್ಟ್ರೀಮ್ ಆಗಲಿದ್ದು, ನಟ ಸೃಜನ್ ಲೋಕೇಶ್ ಅವರ Sruja Talkies ಎಂಬ ಶೋ ಕೂಡ ಲೈನ್ ಅಪ್ ಆಗಿದೆ. ವಾರಾಂತ್ಯ ಸಂಗೀತ ಕಾರ್ಯಕ್ರಮಗಳು ಹಾಗೂ ಇತರ ಮನರಂಜನಾ ವಿಷಯಗಳೂ ಈ ವೇದಿಕೆಯಲ್ಲಿ ಲಭ್ಯವಾಗಲಿವೆ.


