ನವದೆಹಲಿ, ನ.17:
ಭಾರತವು ಅಭಿವೃದ್ಧಿಶೀಲ ಹಾಗೂ ಸ್ವಾವಲಂಬಿ ರಾಷ್ಟ್ರವಾಗಲು ತೀವ್ರ ಆಸಕ್ತಿ ಮತ್ತು ಸಂಕಲ್ಪ ಹೊಂದಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಅವರು ನವದೆಹಲಿಯಲ್ಲಿ ನಡೆದ ಆರನೇ ರಾಮನಾಥ್ ಗೋಯಂಕಾ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಪ್ರಧಾನಿಯವರ ಮಾತುಗಳ ಪ್ರಕಾರ, 21ನೇ ಶತಮಾನದ ಕಳೆದ 25 ವರ್ಷಗಳು ಅತ್ಯಂತ ವೇಗವಾಗಿ ಸಾಗಿದ್ದು, ಅನೇಕ ಜಾಗತಿಕ ಸವಾಲುಗಳ ನಡುವೆಯೂ ಭಾರತದ ಪ್ರಗತಿಯ ವೇಗ ಎಂದೂ ಕುಂಠಿತವಾಗಿಲ್ಲ ಎಂದು ಹೇಳಿದರು:
ಜಾಗತಿಕ ಸವಾಲುಗಳಿದ್ದರೂ, ಭಾರತವು ಇಂದಿಗೆ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ. ಭಾರತ ಈಗ ಕೇವಲ emerging market ಅಲ್ಲ, emerging model ಕೂಡ. ವಿಶ್ವವು ಭಾರತವನ್ನು ನಂಬಿಕೆಯ ಮತ್ತು ಭರವಸೆಯ ಬೆಳವಣಿಗೆ ಮಾದರಿಯಾಗಿ ನೋಡುತ್ತಿದೆ ಎಂದು ಮೋದಿ ಅಭಿಪ್ರಾಯಪಟ್ಟರು.
ಇತ್ತೀಚಿನ ಬಿಹಾರ್ ವಿಧಾನಸಭೆ ಚುನಾವಣೆಗಳನ್ನು ಉಲ್ಲೇಖಿಸಿದ ಅವರು, ರಾಜ್ಯದಲ್ಲಿ 1951ರಿಂದಲೂ ಅತ್ಯುನ್ನತ ಮತದಾನ ಪ್ರಮಾಣ ದಾಖಲಾಗಿದೆ ಎಂದರು. ಬಿಹಾರದ ಜನತೆ ಯಾವ ರೀತಿಯ ಆಡಳಿತ ಬಯಸುತ್ತಾರೆ ಎಂಬುದನ್ನು ಈ ಫಲಿತಾಂಶ ಸ್ಪಷ್ಟಪಡಿಸಿದೆ ಎಂದು ಹೇಳಿದರು.
ರಾಜ್ಯ ಅಥವಾ ಕೇಂದ್ರ — ಯಾವ ಪಕ್ಷದ ಸರ್ಕಾರವಿದ್ದರೂ, ಅವರ ಮೊದಲ ಗುರಿ ಅಭಿವೃದ್ಧಿಯೇ ಆಗಬೇಕು, ಎಂದು ಪ್ರಧಾನಿ ಸ್ಪಷ್ಟ ಸಂದೇಶ ನೀಡಿದರು.
ರಾಜ್ಯ ಸರ್ಕಾರಗಳು ಬಂಡವಾಳ ಹೂಡಿಕೆ ಆಕರ್ಷಣೆ, ಉದ್ಯಮ ಸುಗಮತೆ, ಆರ್ಥಿಕ ಬೆಳವಣಿಗೆಗಳಲ್ಲಿ ಪರಸ್ಪರ ಸ್ಪರ್ಧಿಸಬೇಕೆಂದು ಅವರು ಒತ್ತಾಯಿಸಿದರು. ಉದ್ಯಮ ಸುಗಮತೆಯನ್ನು ಹೆಚ್ಚಿಸಲು ಸ್ಪರ್ಧಾತ್ಮಕ ಕಾರ್ಯಕ್ರಮಗಳು ಮತ್ತು ರ್ಯಾಂಕಿಂಗ್ ವ್ಯವಸ್ಥೆಗಳು ಪರಿಣಾಮಕಾರಿ ಕ್ರಮಗಳಾಗಬಹುದು ಎಂದು ಅಭಿಪ್ರಾಯಪಟ್ಟರು.


