ಪರಪ್ಪನ ಅಗ್ರಹಾರ ಜೈಲು ಅಕ್ರಮಗಳ ಬಯಲು – ಹೈಪವರ್ ಸಮಿತಿ ರಚನೆ, ಇಬ್ಬರು ಅಧಿಕಾರಿಗಳು ಅಮಾನತು!

2 Min Read
2 Min Read

ಬೆಂಗಳೂರು, ನ.10:
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ ಅಕ್ರಮ ಚಟುವಟಿಕೆಗಳು ಮತ್ತು ನಿರ್ಲಕ್ಷ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ತಕ್ಷಣದ ಕ್ರಮವಾಗಿ ಹೈಪವರ್ ಸಮಿತಿಯನ್ನು ರಚಿಸಿದೆ.

ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಎರಡು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದ್ದು, ಚೀಫ್ ಸೂಪರಿಂಟೆಂಡೆಂಟ್ ಕೆ. ಸುರೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಇಮ್ಮಿಡಿಯೇಟ್ ಸೂಪರಿಂಟೆಂಡೆಂಟ್ ಮ್ಯಾಗೇರಿ ಹಾಗೂ ಸಹಾಯಕ ಸೂಪರಿಂಟೆಂಡೆಂಟ್ ಅಶೋಕ್ ಭಜಂತ್ರಿ ಅವರನ್ನು ಅಮಾನತುಗೊಳಿಸಲಾಗಿದೆ.

ಮುಂದಿನಿಂದ ಪರಪ್ಪನ ಅಗ್ರಹಾರ ಕಾರಾಗೃಹದ ಚೀಫ್ ಸೂಪರಿಂಟೆಂಡೆಂಟ್ ಹುದ್ದೆಗೆ ಮೊದಲ ಬಾರಿಗೆ ಐಪಿಎಸ್ ಅಧಿಕಾರಿಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ.

ರಾಜ್ಯದಲ್ಲಿನ ಎಲ್ಲ ಕಾರಾಗೃಹಗಳಲ್ಲಿ ನಡೆಯುತ್ತಿರುವ ಆಡಳಿತ ಮತ್ತು ಭದ್ರತಾ ವ್ಯವಸ್ಥೆ ಪರಿಶೀಲನೆಗಾಗಿ ಹೈಪವರ್ ಸಮಿತಿ ರಚನೆ ಮಾಡಲಾಗಿದ್ದು, ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಅವರ ನೇತೃತ್ವದಲ್ಲಿ ಐಜಿಪಿ ಸಂದೀಪ್ ಪಾಟೀಲ್, ಎಸ್‌ಪಿ ಅಮರನಾಥ್ ರೆಡ್ಡಿ, ಹಾಗೂ ಎಸ್‌ಪಿ ರಿಷ್ಯಾಂತ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಈ ಸಮಿತಿಯು ರಾಜ್ಯದ ಎಲ್ಲಾ ಕಾರಾಗೃಹಗಳಲ್ಲಿ ಭದ್ರತೆ, ಸಿಸಿಟಿವಿ ಕಾರ್ಯವೈಖರಿ, ನಿಷೇಧಿತ ವಸ್ತುಗಳ ಪ್ರವೇಶ ಹಾಗೂ ಆಡಳಿತದ ಲೋಪಗಳ ಕುರಿತು ಸಮಗ್ರ ವರದಿ ಸಲ್ಲಿಸಬೇಕಿದೆ. ವರದಿ ಸಲ್ಲಿಸಲು ಒಂದು ತಿಂಗಳ ಗಡುವು ನೀಡಲಾಗಿದೆ.

ಪರಪ್ಪನ ಅಗ್ರಹಾರದಲ್ಲಿ ನಡೆದ ಘಟನೆಗಳ ಹಿನ್ನೆಲೆಯಲ್ಲಿ, ಸಿಸಿಟಿವಿ ಕ್ಯಾಮೆರಾಗಳ ನವೀಕರಣ, ಬ್ಯಾಗೇಜ್ ಸ್ಕ್ಯಾನರ್‌ಗಳ ಅಳವಡಿಕೆ, ಹಾಗೂ ಜಾಮರ್‌ಗಳ ತಾಂತ್ರಿಕ ತಪಾಸಣೆ ಕೈಗೊಳ್ಳಲಾಗುವುದು. ಕಾರಾಗೃಹಗಳಲ್ಲಿ ಸಿಗ್ನಲ್ ನಿಷೇಧ ಪ್ರದೇಶಗಳನ್ನು (Shadow Area) ರಚಿಸಿ, ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ತಡೆಯಲಾಗುವುದು.

ಸಿಬ್ಬಂದಿ ಕೊರತೆಯನ್ನು ಪೂರೈಸಲು 197 ವಾರ್ಡರ್‌, 22 ಇನ್‌ಸ್ಟ್ರಕ್ಟರ್‌, 3 ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಲಾಗಿದೆ. ಜೊತೆಗೆ 983 ವಾರ್ಡರ್‌ ಮತ್ತು 17 ಜೈಲರ್‌ಗಳ ನೇಮಕಾತಿ ಪ್ರಸ್ತಾವನೆ ಸರ್ಕಾರದ ಪರಿಗಣನೆಯಲ್ಲಿ ಇದೆ.

ಕಾರಾಗೃಹಗಳಲ್ಲಿ ಐದು ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿರುವ ಅಧಿಕಾರಿಗಳನ್ನು ತಕ್ಷಣ ವರ್ಗಾವಣೆ ಮಾಡಲಾಗುವುದು. ಸರ್ಕಾರದಿಂದ ಎಲ್ಲ ಕಾರಾಗೃಹ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದ್ದು,

“ಇಂತಹ ಘಟನೆಗಳು ಮರುಕಳಿಸಿದರೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ,”
ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.

ರಾಜ್ಯದ ಎಲ್ಲಾ ಕಾರಾಗೃಹಗಳ ಮೇಲ್ವಿಚಾರಣೆಗಾಗಿ ಕಮಾಂಡ್ ಸೆಂಟರ್ ಸ್ಥಾಪಿಸಲಾಗಲಿದ್ದು, ಅದನ್ನು ಡಿಜಿ ಅಥವಾ ಎಡಿಜಿಪಿ ಕಾರಾಗೃಹ ನೇರವಾಗಿ ನಿಗಾವಹಿಸಲಿದ್ದಾರೆ.

ಸಭೆಯಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ, ಕಾರ್ಯದರ್ಶಿ ಕೆ.ವಿ. ಶರತ್ ಚಂದ್ರ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್, ಹಾಗೂ ಎಡಿಜಿಪಿ ಚಂದ್ರಶೇಖರ್ ಉಪಸ್ಥಿತರಿದ್ದರು.

Share This Article
Leave a Comment