ನವದೆಹಲಿ: ಭಾರತದ ಕಾರ್ಬನ್ ಮಾರುಕಟ್ಟೆ ಅಭಿವೃದ್ಧಿ ಹಾಗೂ ಯುರೋಪಿಯನ್ ಒಕ್ಕೂಟದ ಕಾರ್ಬನ್ ಗಡಿ ಹೊಂದಾಣಿಕೆ ವ್ಯವಸ್ಥೆ (CBAM) ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಕೇಂದ್ರ ವಿದ್ಯುತ್ ಸಚಿವಾಲಯದ ಕಾರ್ಯದರ್ಶಿ ಪಂಕಜ್ ಅಗರ್ವಾಲ್ ಮತ್ತು ಯುರೋಪಿಯನ್ ಕಮಿಷನ್ನ ತೆರಿಗೆ ಮತ್ತು ಕಸ್ಟಮ್ಸ್ ಒಕ್ಕೂಟದ ಮಹಾನಿರ್ದೇಶಕ ಗೆರಾಸಿಮೋಸ್ ಥಾಮಸ್ ದೆಹಲಿಯಲ್ಲಿ ದ್ವಿಪಕ್ಷೀಯ ಸಭೆ ನಡೆಸಿದರು.
ಸಭೆಯಲ್ಲಿ ಭಾರತದ ಕಾರ್ಬನ್ ಮಾರುಕಟ್ಟೆಯ ಪ್ರಗತಿ, ಹೊರಸೂಸುವಿಕೆ ಕಡಿತದ ಗುರಿಗಳು ಹಾಗೂ ಎರಡೂ ಕಡೆಯ ತಾಂತ್ರಿಕ ಸಹಕಾರವನ್ನು ವಿಸ್ತರಿಸುವ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಯಿತು.
ಭಾರತದ ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಯೋಜನೆಯಡಿ ಕೈಗೊಂಡಿರುವ ಕ್ರಮಗಳನ್ನು ಪಂಕಜ್ ಅಗರ್ವಾಲ್ ವಿವರಿಸಿದರು. ಈ ಯೋಜನೆಯ ಭಾಗವಾಗಿ 490 ಕೈಗಾರಿಕಾ ಘಟಕಗಳಿಗೆ ಹೊರಸೂಸುವಿಕೆಯ ತೀವ್ರತೆಯನ್ನು ಕಡಿಮೆ ಮಾಡುವ ಗುರಿಗಳನ್ನು ಅಧಿಸೂಚಿಸಲಾಗಿದೆ. ದೇಶೀಯ ಕಾರ್ಬನ್ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿಯೂ ಪ್ರಗತಿ ಸಾಧಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಬನ್ ಬೆಲೆ ನಿಗದಿ ವ್ಯವಸ್ಥೆಗಳ ಪರಸ್ಪರ ಮಾನ್ಯತೆ, ಹೊರಸೂಸುವಿಕೆ ಮೇಲ್ವಿಚಾರಣೆ, ವರದಿ ಸಲ್ಲಿಕೆ ಮತ್ತು ಪರಿಶೀಲನಾ ವ್ಯವಸ್ಥೆಗಳು ಹಾಗೂ ಸಾಮರ್ಥ್ಯ ವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಾಂತ್ರಿಕ ಮಟ್ಟದ ಮಾತುಕತೆ ಮುಂದುವರಿಸಲು ಎರಡೂ ಕಡೆಯವರು ಸಮ್ಮತಿ ಸೂಚಿಸಿದರು.
ಇದಲ್ಲದೆ, ಕಾರ್ಬನ್ ಮಾರುಕಟ್ಟೆ, CBAMಗೆ ಸಂಬಂಧಿಸಿದ ವಿಧಾನಗಳು ಹಾಗೂ ಪರಸ್ಪರ ಹಿತಾಸಕ್ತಿಯ ಇತರ ವಿಷಯಗಳಲ್ಲಿ ಸಹಕಾರವನ್ನು ಬಲಪಡಿಸಿ, ನಿರಂತರ ಸಂವಾದಕ್ಕೆ ಅವಕಾಶ ಕಲ್ಪಿಸಲು ಸಭೆಯಲ್ಲಿ ಒಪ್ಪಿಗೆ ವ್ಯಕ್ತವಾಯಿತು.


