ಶಿವಣ್ಣನ ‘ಎ ಫಾರ್ ಆನಂದ್‌’ಗೆ ಬಾಲಿವುಡ್ ಬೆಡಗಿ ರವೀನಾ ಟಂಡನ್ ಎಂಟ್ರಿ

2 Min Read
2 Min Read

ಬೆಂಗಳೂರು: ಬಾಲಿವುಡ್‌ನ ಜನಪ್ರಿಯ ನಟಿ ರವೀನಾ ಟಂಡನ್ ಇದೀಗ ಕನ್ನಡ ಚಿತ್ರರಂಗಕ್ಕೆ ಮತ್ತೊಮ್ಮೆ ಮರಳಿದ್ದಾರೆ. ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್ ಅಭಿನಯದ ಹಾಗೂ ಎಂ.ಜಿ. ಶ್ರೀನಿವಾಸ್ (ಶ್ರೀನಿ) ನಿರ್ದೇಶನದ ‘ಎ ಫಾರ್ ಆನಂದ್’ ಸಿನಿಮಾದಲ್ಲಿ ರವೀನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ರವೀನಾ ಮತ್ತು ಶಿವಣ್ಣ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಶ್ರೀನಿ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಬುಧವಾರ ಬೆಂಗಳೂರಿನಲ್ಲಿ ಅಧಿಕೃತವಾಗಿ ಆರಂಭವಾಗಿದೆ. ನಗರದ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಆವರಣದಲ್ಲಿ ರವೀನಾ ಟಂಡನ್ ತಮ್ಮ ಮೊದಲ ದಿನದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಚಿತ್ರತಂಡದ ಶೂಟಿಂಗ್‌ಗೆ ವಿಶ್ವವಿದ್ಯಾಲಯದ ಸಂಸ್ಥಾಪಕ-ಅಧ್ಯಕ್ಷ ಡಾ. ನಿಸಾರ್ ಅಹ್ಮದ್ ಚಾಲನೆ ನೀಡಿ, ಚಿತ್ರತಂಡವನ್ನು ಅಭಿನಂದಿಸಿದರು.

ಕನ್ನಡ ಸಿನಿಮಾಗಳಿಗೆ ರವೀನಾ ಮತ್ತೆ ವಾಪಸ್

ರವೀನಾ ಟಂಡನ್ ಅವರಿಗೆ ಕನ್ನಡ ಚಿತ್ರರಂಗದೊಂದಿಗೆ ಹಿಂದಿನಿಂದಲೂ ನಂಟಿದೆ. ಉಪೇಂದ್ರ ಅಭಿನಯದ ‘ಉಪೇಂದ್ರ’ (1999) ಸಿನಿಮಾದ ಮೂಲಕ ಕನ್ನಡಕ್ಕೆ ಬಂದಿದ್ದ ಅವರು, ಬಳಿಕ ‘ಕೆಜಿಎಫ್: ಚಾಪ್ಟರ್ 2’ ಮೂಲಕ ಮತ್ತೊಮ್ಮೆ ಕನ್ನಡ ಪ್ರೇಕ್ಷಕರ ಗಮನ ಸೆಳೆದಿದ್ದರು.

ಇದೀಗ ‘ಎ ಫಾರ್ ಆನಂದ್’ ಮೂಲಕ ರವೀನಾ ಮತ್ತೊಮ್ಮೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ. ಹಲವು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿರುವ ರವೀನಾ, ಈ ಸಿನಿಮಾದ ಮೂಲಕ ಶಿವರಾಜ್‌ಕುಮಾರ್ ಅವರೊಂದಿಗೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಶ್ರೀನಿ–ಶಿವಣ್ಣ ಕಾಂಬಿನೇಷನ್ ಮತ್ತೆ

‘ಎ ಫಾರ್ ಆನಂದ್’ ಶ್ರೀನಿ ಮತ್ತು ಶಿವರಾಜ್‌ಕುಮಾರ್ ಅವರ ಮತ್ತೊಂದು ಸಹಯೋಗದ ಸಿನಿಮಾ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ‘ಘೋಸ್ಟ್’ ಗಮನ ಸೆಳೆದಿತ್ತು.

ಇದೀಗ ಸಂಪೂರ್ಣ ವಿಭಿನ್ನ ಹಿನ್ನೆಲೆಯ ಕಥೆಯೊಂದಿಗೆ ಇಬ್ಬರೂ ಮತ್ತೆ ಒಂದಾಗಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಶಿಕ್ಷಕರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಮಕ್ಕಳ ಜೀವನ, ಶಿಕ್ಷಣ ಹಾಗೂ ಶಿಕ್ಷಕ–ವಿದ್ಯಾರ್ಥಿ ಸಂಬಂಧವನ್ನು ಕೇಂದ್ರವಾಗಿಟ್ಟುಕೊಂಡ ಕೌಟುಂಬಿಕ ಕಥಾಹಂದರ ಹೊಂದಿದೆ.

ಗೀತಾ ಶಿವರಾಜ್‌ಕುಮಾರ್ ನಿರ್ಮಾಣ

ಗೀತಾ ಶಿವರಾಜ್‌ಕುಮಾರ್ ಅವರ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ಮಹೇಂದ್ರ ಸಿಂಹ ಛಾಯಾಗ್ರಹಣ ಹಾಗೂ ದೀಪು ಎಸ್. ಕುಮಾರ್ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ರವೀನಾ ಟಂಡನ್ ಅವರ ಸೇರ್ಪಡೆಯೊಂದಿಗೆ ಚಿತ್ರದ ತಾರಾಗಣ ಮತ್ತಷ್ಟು ವಿಸ್ತರಿಸಿದ್ದು, ಶಿವಣ್ಣ ಅವರ ವಿಭಿನ್ನ ಪಾತ್ರದೊಂದಿಗೆ ಸಿನಿಮಾ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

Share This Article