ಅಕ್ರಾ: ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಘಾನಾ ರಾಜಧಾನಿ ಅಕ್ರಾಗೆ ಆಗಮಿಸಿದ್ದಾರೆ. ಘಾನಾದ ವಿದೇಶಾಂಗ ಸಚಿವ ಸ್ಯಾಮ್ ಒಕುಡ್ಜೆಟೊ ಅಬ್ಲಾಕ್ವಾ ಅವರು ಜೈಶಂಕರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಅಕ್ರಾಗೆ ಆಗಮಿಸಿದ ಬಳಿಕ ಪ್ರತಿಕ್ರಿಯಿಸಿರುವ ಜೈಶಂಕರ್, ಆತ್ಮೀಯ ಸ್ವಾಗತಕ್ಕಾಗಿ ಘಾನಾ ವಿದೇಶಾಂಗ ಸಚಿವರಿಗೆ ಧನ್ಯವಾದ ತಿಳಿಸಿದ್ದಾರೆ. ಭಾರತ–ಘಾನಾ ನಡುವಿನ ಸಮಗ್ರ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಫಲಪ್ರದ ಮಾತುಕತೆ ನಡೆಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.
ಹಲವು ಕ್ಷೇತ್ರಗಳಲ್ಲಿ ಸಹಕಾರಕ್ಕೆ ಒತ್ತು
ಜೈಶಂಕರ್ ಅವರ ಭೇಟಿಯ ವೇಳೆ ಭಾರತ ಮತ್ತು ಘಾನಾ ನಡುವಿನ ವ್ಯಾಪಾರ, ಹೂಡಿಕೆ, ಅಭಿವೃದ್ಧಿ ಸಹಕಾರ, ಔಷಧ ಕ್ಷೇತ್ರ, ಸಾಮರ್ಥ್ಯ ವೃದ್ಧಿ, ರಕ್ಷಣೆ, ತಂತ್ರಜ್ಞಾನ ಹಾಗೂ ಜನರಿಂದ ಜನರ ನಡುವಿನ ಬಾಂಧವ್ಯ ಸೇರಿದಂತೆ ಹಲವು ಕ್ಷೇತ್ರಗಳ ಕುರಿತು ಚರ್ಚೆ ನಡೆಯಲಿದೆ.
ಇದರ ಜೊತೆಗೆ ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರ ಹೆಚ್ಚಿಸುವುದು ಹಾಗೂ ಆಫ್ರಿಕನ್ ಯೂನಿಯನ್ ಮತ್ತು ECOWAS ಜೊತೆ ಭಾರತದ ಸಂಪರ್ಕವನ್ನು ಮತ್ತಷ್ಟು ಗಟ್ಟಿಗೊಳಿಸುವ ಕುರಿತೂ ಮಾತುಕತೆ ನಡೆಯಲಿದೆ.
ಆಫ್ರಿಕಾ ಪ್ರವಾಸದ ಭಾಗ
ಜೈಶಂಕರ್ ಅವರ ಈ ಭೇಟಿ ಅಕ್ಟೋಬರ್ 6ರಿಂದ 10ರವರೆಗೆ ನಡೆಯುತ್ತಿರುವ ಐದು ದಿನಗಳ ಮೂರು ರಾಷ್ಟ್ರಗಳ ಆಫ್ರಿಕಾ ಪ್ರವಾಸದ ಭಾಗವಾಗಿದೆ. ಘಾನಾ ಬಳಿಕ ಅವರು ಕೋಟ್ ಡಿ’ಐವರ್ ಮತ್ತು ಇಥಿಯೋಪಿಯಾಗೆ ಭೇಟಿ ನೀಡಲಿದ್ದಾರೆ. ಈ ಪ್ರವಾಸದ ಮೂಲಕ ಆಫ್ರಿಕಾ ರಾಷ್ಟ್ರಗಳೊಂದಿಗೆ ಭಾರತದ ದ್ವಿಪಕ್ಷೀಯ ಸಹಕಾರ ಮತ್ತು ಜಾಗತಿಕ ದಕ್ಷಿಣ ರಾಷ್ಟ್ರಗಳ ನಡುವಿನ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವಿದೆ


