ಬೆಂಗಳೂರು: ‘ಕಾಂತಾರ’ ಚಿತ್ರದ ಯಶಸ್ಸಿನ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೊಡಗಿಸಿಕೊಂಡಿರುವ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ, ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಅವರ ನಿರ್ಮಾಣ ಸಂಸ್ಥೆ ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಇದೀಗ ತಮ್ಮೊಂದಿಗೆ ಹಲವು ವರ್ಷಗಳಿಂದ ಕೆಲಸ ಮಾಡಿರುವ ಶಿವಚಿರಂತನಾ ಅವರ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ಬೆಂಬಲ ನೀಡುತ್ತಿದೆ. ‘ಸರ್ಕಾರಿ ಹಿ. ಪ್ರಾ. ಶಾಲೆ, ಕಾಸರಗೋಡು’, ‘ಕಥಾ ಸಂಗಮ’, ‘ಹೀರೋ’, ‘ಪೆಡ್ರೋ’, ‘ಶಿವಮ್ಮ’ ಮತ್ತು ‘ಲಾಫಿಂಗ್ ಬುದ್ಧ’ ಸೇರಿದಂತೆ ವಿಭಿನ್ನ ಕಥಾವಸ್ತುಗಳ ಚಿತ್ರಗಳನ್ನು ನಿರ್ಮಿಸಿರುವ ಈ ಸಂಸ್ಥೆ, ಇದೀಗ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದೆ.
ಹತ್ತು ವರ್ಷಗಳ ಚಿತ್ರರಂಗದ ಅನುಭವ
ಶಿವಚಿರಂತನಾ ಕಳೆದ ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ತಂತ್ರಜ್ಞ ಹಾಗೂ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಆರಂಭದಲ್ಲಿ ಎರಡು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅವರು, ಬಳಿಕ ಜಯತೀರ್ಥ, ಸಂತೋಷ್ ಆನಂದ್ರಾಮ್ ಮತ್ತು ನಿತಿನ್ ಶೆಟ್ಟಿ ಅವರಂತಹ ನಿರ್ದೇಶಕರೊಂದಿಗೆ ಸುಮಾರು 10ರಿಂದ 11 ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಅನುಭವ ಪಡೆದಿದ್ದಾರೆ.
ರಿಷಬ್ ಶೆಟ್ಟಿ ಅವರೊಂದಿಗಿನ ಒಡನಾಟ ‘ಬೆಲ್ ಬಾಟಮ್’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಆರಂಭವಾಯಿತು. ನಂತರ ‘ಕಾಂತಾರ’ ಚಿತ್ರದ ಎರಡೂ ಭಾಗಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡುವ ಅವಕಾಶ ಶಿವಚಿರಂತನಾ ಅವರಿಗೆ ದೊರೆಯಿತು. ಇದೀಗ ರಿಷಬ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯ ಬೆಂಬಲದೊಂದಿಗೆ ನಿರ್ದೇಶಕರಾಗಿ ಹೊಸ ಪಯಣ ಆರಂಭಿಸುತ್ತಿದ್ದಾರೆ.
ಆಡಿಷನ್ಗೆ 6,000ಕ್ಕೂ ಹೆಚ್ಚು ಜನರಿಂದ ಸ್ಪಂದನೆ
ಚಿತ್ರದ ಪಾತ್ರಗಳಿಗೆ ಹೊಸ ಕಲಾವಿದರನ್ನು ಆಯ್ಕೆ ಮಾಡಲು ನಡೆಸಿದ ಮುಕ್ತ ಆಡಿಷನ್ಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರಂಭದಲ್ಲಿ ಸುಮಾರು 2,000 ಮಂದಿ ಅರ್ಜಿ ಸಲ್ಲಿಸಬಹುದು ಎಂದು ಚಿತ್ರತಂಡ ಅಂದಾಜಿಸಿತ್ತು. ಆದರೆ, ಸುಮಾರು 6,000 ಮಂದಿ ಆಸಕ್ತರು ಆಡಿಷನ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಮುಂದೆ ಬಂದಿದ್ದಾರೆ.
ಸದ್ಯ ಅಭ್ಯರ್ಥಿಗಳ ಪ್ರೊಫೈಲ್ಗಳನ್ನು ಪರಿಶೀಲಿಸಿ, ಮುಂದಿನ ಹಂತಕ್ಕೆ ಆಯ್ಕೆ ಮಾಡುವ ಕಾರ್ಯ ನಡೆಯುತ್ತಿದೆ. ಮೊದಲ ದಿನವೇ ಸುಮಾರು 1,000 ಪ್ರೊಫೈಲ್ಗಳನ್ನು ಪರಿಶೀಲಿಸಲಾಗಿದ್ದು, ಮೂರನೇ ಹಂತದ ವೇಳೆಗೆ ಅಭ್ಯರ್ಥಿಗಳ ಸಂಖ್ಯೆ 600ರಿಂದ 700ರಷ್ಟಿತ್ತು ಎಂದು ನಿರ್ದೇಶಕರು ತಿಳಿಸಿದ್ದಾರೆ.
ಸುಮಾರು 60 ಕಲಾವಿದರಿಗೆ ಅವಕಾಶ
ಈ ಚಿತ್ರದಲ್ಲಿ ಸುಮಾರು 60 ಕಲಾವಿದರು ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಅವರಲ್ಲಿ ಶೇ.70ರಷ್ಟು ಮಂದಿಯನ್ನು ಆಡಿಷನ್ ಮೂಲಕವೇ ಆಯ್ಕೆ ಮಾಡಲು ಚಿತ್ರತಂಡ ಯೋಜಿಸಿದೆ. ಉಳಿದ ಪಾತ್ರಗಳಿಗೂ ಹೊಸ ಮುಖಗಳಿಗೆ ಆದ್ಯತೆ ನೀಡುವ ಉದ್ದೇಶವಿದ್ದು, ಪರಿಚಿತ ಕಲಾವಿದರಿಗೆ ಸೀಮಿತ ಅವಕಾಶ ಇರಲಿದೆ.
ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದರ ಜೊತೆಗೆ ವಿಭಿನ್ನ ಕಲಾವಿದರನ್ನು ಒಟ್ಟುಗೂಡಿಸುವ ಪ್ರಯತ್ನವಾಗಿ ಈ ಸಿನಿಮಾ ರೂಪುಗೊಳ್ಳುತ್ತಿದೆ.
‘ಜೈ ಹನುಮಾನ್’ ಚಿತ್ರೀಕರಣದಲ್ಲೂ ರಿಷಬ್ ಬ್ಯುಸಿ
ಇನ್ನೊಂದೆಡೆ, ರಿಷಬ್ ಶೆಟ್ಟಿ ಅವರು ಪ್ರಶಾಂತ್ ವರ್ಮಾ ನಿರ್ದೇಶನದ ‘ಜೈ ಹನುಮಾನ್’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ‘ಮಂಜುಮ್ಮೆಲ್ ಬಾಯ್ಸ್’ ಖ್ಯಾತಿಯ ನಿರ್ದೇಶಕ ಚಿದಂಬರಂ ಅವರೊಂದಿಗೆ ಎರಡು ಚಿತ್ರಗಳಿಗಾಗಿ ಕೈಜೋಡಿಸುವ ಸಾಧ್ಯತೆಯೂ ವರದಿಯಾಗಿದೆ. ಈ ಸಹಯೋಗದ ಮೊದಲ ಚಿತ್ರ ಕನ್ನಡದ ಕ್ರೀಡಾ ಕಥಾಹಂದರ ಹೊಂದಿರುವ ಸಿನಿಮಾ ಎನ್ನಲಾಗಿದೆ.


