ನಗರ–ಗ್ರಾಮದ ಅಂತರ ಗಣನೀಯವಾಗಿ ಕಡಿಮೆಯಾಗಿದೆ: ಪ್ರಧಾನಿ ಮೋದಿ

2 Min Read
2 Min Read

ನವದೆಹಲಿ: ಕಳೆದ 12 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಅಂತರ ಗಣನೀಯವಾಗಿ ಕಡಿಮೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗ್ರಾಮೀಣ ಮೂಲಸೌಕರ್ಯದಲ್ಲಿ ಆಗಿರುವ ಸುಧಾರಣೆ ಹಾಗೂ ದೇಶದ ಮಹಿಳೆಯರು ಹೆಚ್ಚಿನ ಮಟ್ಟದಲ್ಲಿ ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಸಬಲರಾಗುತ್ತಿರುವುದನ್ನು ಅವರು ಪ್ರಮುಖ ಬದಲಾವಣೆಗಳಾಗಿ ಉಲ್ಲೇಖಿಸಿದ್ದಾರೆ.

‘ಸೇವಾ ಸಂಕಲ್ಪ ಅಭಿಯಾನ’ದಡಿ ವಾರಾಣಸಿಯಿಂದ ವಡನಗರದತ್ತ ಯಾತ್ರೆ ಕೈಗೊಂಡಿರುವ ಸೇವಾ ಯಾತ್ರಿಕರೊಂದಿಗೆ ಪ್ರಧಾನಿ ಮೋದಿ ವರ್ಚುವಲ್ ಸಂವಾದ ನಡೆಸಿದರು. ಈ ವೇಳೆ ಸಾಮಾಜಿಕ ಸೇವೆ, ಸಾಮಾಜಿಕ ಸುಧಾರಣೆ ಹಾಗೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಪ್ರಯತ್ನಗಳ ಮಹತ್ವವನ್ನು ಅವರು ವಿವರಿಸಿದರು.

ಎಲ್ಲರ ಸಹಭಾಗಿತ್ವದಿಂದಲೇ ‘ವಿಕಸಿತ ಭಾರತ’

ವಿಕಸಿತ ಭಾರತ ನಿರ್ಮಾಣವು ಸರ್ಕಾರದ ಪ್ರಯತ್ನಗಳಿಂದ ಮಾತ್ರ ಸಾಧ್ಯವಲ್ಲ. ದೇಶದ ಪ್ರತಿಯೊಬ್ಬ ನಾಗರಿಕನ ಕೊಡುಗೆ ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ ಎಂದು ಪ್ರಧಾನಿ ಮೋದಿ ಹೇಳಿದರು.

ಸಮಾಜ ಸೇವೆಯ ಮೂಲಕ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಯುವಕರು ಮುಂದಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದ ಅವರು, ಸೇವಾ ಮನೋಭಾವವು ಸಮಾಜವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಹೇಳಿದರು.

ವಡನಗರದ ಮೌಲ್ಯ, ಕಾಶಿಯ ಸೇವಾ ಸ್ಪೂರ್ತಿ

ವಡನಗರ ತಮ್ಮ ಜೀವನವನ್ನು ರೂಪಿಸಿದ ಹಲವು ಮೌಲ್ಯಗಳನ್ನು ನೀಡಿದೆ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಸ್ಮರಿಸಿದರು. ಕಾಶಿಯು ಆ ಮೌಲ್ಯಗಳಿಗೆ ಸೇವೆಯ ಹಲವು ಆಯಾಮಗಳನ್ನು ಸೇರಿಸಿದೆ ಎಂದು ಅವರು ಹೇಳಿದರು.

ಈ ಸೇವಾ ಯಾತ್ರೆಗೆ ಯುವಕರು ಕೂಡ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿರುವುದು ಸಂತಸದ ಸಂಗತಿ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವಾ ಚಟುವಟಿಕೆಗಳ ಮೂಲಕ ಯುವಜನತೆ ತಮ್ಮ ಅನುಭವವನ್ನು ವಿಸ್ತರಿಸಿಕೊಳ್ಳುತ್ತಿರುವುದನ್ನು ಅವರು ಶ್ಲಾಘಿಸಿದರು.

ಅನುಭವಗಳನ್ನು ದಾಖಲಿಸಿಕೊಳ್ಳಲು ಸಲಹೆ

ವರ್ಚುವಲ್ ಸಂವಾದದ ವೇಳೆ ಸೇವಾ ಯಾತ್ರಿಕರು ಯಾತ್ರೆಯಲ್ಲಿನ ತಮ್ಮ ಅನುಭವಗಳನ್ನು ಪ್ರಧಾನಿಯೊಂದಿಗೆ ಹಂಚಿಕೊಂಡರು. ಯಾತ್ರೆಯ ಸಂದರ್ಭದಲ್ಲಿ ಎದುರಾದ ಅನುಭವಗಳು, ಭೇಟಿಯಾದ ಜನರು ಹಾಗೂ ಸೇವಾ ಚಟುವಟಿಕೆಗಳ ಕುರಿತು ನಿಯಮಿತವಾಗಿ ಡೈರಿ ಬರೆಯುವಂತೆ ಮೋದಿ ಯಾತ್ರಿಕರಿಗೆ ಸಲಹೆ ನೀಡಿದರು.

ಇಂತಹ ಅನುಭವಗಳನ್ನು ದಾಖಲಿಸಿಕೊಳ್ಳುವುದರಿಂದ ಯಾತ್ರೆಯ ನೆನಪುಗಳನ್ನು ಉಳಿಸಿಕೊಳ್ಳುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಸಮಾಜ ಸೇವೆಯ ಚಟುವಟಿಕೆಗಳಿಗೆ ಅವು ಮಾರ್ಗದರ್ಶನ ನೀಡಬಹುದು ಎಂದು ಅವರು ತಿಳಿಸಿದರು.

Share This Article