ತೆಹ್ರಾನ್: ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ಸಂಪೂರ್ಣ ನಿಯಂತ್ರಣ ಹೊಂದಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಇರಾನ್ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಾಘ್ಚಿ ಇಂದು ತಳ್ಳಿಹಾಕಿದ್ದಾರೆ.
ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಪ್ರತಿಕ್ರಿಯಿಸಿರುವ ಅರಾಘ್ಚಿ, ಗುಪ್ತಚರ ವೈಫಲ್ಯಗಳಿಂದಾಗಿ ಅಮೆರಿಕವು ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದಂತೆ ಪದೇಪದೇ ತಪ್ಪು ಲೆಕ್ಕಾಚಾರಗಳನ್ನು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ಸಂಪೂರ್ಣ ನಿಯಂತ್ರಣ ಸಾಧಿಸಿದೆ ಮತ್ತು ಅದನ್ನು ಮುಂದುವರಿಸಿಕೊಂಡು ಹೋಗಲಿದೆ ಎಂದು ಟ್ರಂಪ್ ಹೇಳಿಕೆ ನೀಡಿದ ಬಳಿಕ ಇರಾನ್‌ನಿಂದ ಈ ಪ್ರತಿಕ್ರಿಯೆ ಬಂದಿದೆ.
ಇರಾನ್‌ನ ಮಿಲಿಟರಿ ಮೂಲಸೌಕರ್ಯ ತೀವ್ರವಾಗಿ ದುರ್ಬಲಗೊಂಡಿದೆ ಎಂಬುದಾಗಿಯೂ ಟ್ರಂಪ್ ಹೇಳಿಕೊಂಡಿದ್ದರು. ಆದರೆ ಈ ಹೇಳಿಕೆಗಳನ್ನೂ ಇರಾನ್ ತಿರಸ್ಕರಿಸಿದೆ.
ಹಾರ್ಮುಜ್ ಜಲಸಂಧಿ ಇನ್ನೂ ನಿರ್ಬಂಧಿತವಾಗಿಯೇ ಇದೆ ಎಂದು ಇರಾನ್ ಹೇಳಿದ್ದು, ತೆಹ್ರಾನ್ ಮುಂದಿಟ್ಟಿರುವ ಷರತ್ತುಗಳನ್ನು ಒಪ್ಪಿಕೊಳ್ಳುವವರೆಗೆ ಜಲಸಂಧಿಯನ್ನು ಮತ್ತೆ ತೆರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.


