ಢಾಕಾ: ಬಾಂಗ್ಲಾದೇಶದ ಆಡಳಿತಾರೂಢ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP) ತನ್ನ ಪ್ರಧಾನ ಕಾರ್ಯದರ್ಶಿ ಮಿರ್ಜಾ ಫಖ್ರುಲ್ ಇಸ್ಲಾಂ ಆಲಂಘೀರ್ ಅವರನ್ನು ದೇಶದ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗಿ ಇಂದು ನಾಮನಿರ್ದೇಶನ ಮಾಡಿದೆ.
ಬಾಂಗ್ಲಾದೇಶದ ಅಧ್ಯಕ್ಷೀಯ ಚುನಾವಣೆ ಆಗಸ್ಟ್ 20ರಂದು ನಡೆಯಲಿದೆ. ಪಕ್ಷದ ಹಿರಿಯ ಜಂಟಿ ಪ್ರಧಾನ ಕಾರ್ಯದರ್ಶಿ ರುಹುಲ್ ಕಬೀರ್ ರಿಜ್ವಿ ಅವರು 78 ವರ್ಷದ ಹಿರಿಯ ನಾಯಕ ಆಲಂಘೀರ್, ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡ ಬಳಿಕ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನ ಹಾಗೂ ಅತ್ಯುನ್ನತ ನೀತಿ ನಿರ್ಧಾರ ಸಮಿತಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಢಾಕಾದ ಪ್ರಧಾನಮಂತ್ರಿ ಸಚಿವಾಲಯದಲ್ಲಿ ಪ್ರಧಾನಿ ಹಾಗೂ ಬಿಎನ್‌ಪಿ ಅಧ್ಯಕ್ಷ ತಾರಿಕ್ ರಹಮಾನ್ ಅವರೊಂದಿಗೆ ಪಕ್ಷದ ಹಿರಿಯ ನಾಯಕರ ಸಭೆ ನಡೆದ ಬಳಿಕ ಆಲಂಘೀರ್ ಅವರ ಉಮೇದುವಾರಿಕೆಯನ್ನು ಘೋಷಿಸಲಾಯಿತು.
ವಿರೋಧ ಪಕ್ಷದಿಂದಲೂ ಅಭ್ಯರ್ಥಿ
ಬಾಂಗ್ಲಾದೇಶದ ಪ್ರಮುಖ ವಿರೋಧ ಪಕ್ಷವಾದ ಜಮಾತ್-ಎ-ಇಸ್ಲಾಮಿ ನೇತೃತ್ವದ ಮೈತ್ರಿಕೂಟವೂ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯನ್ನು ಘೋಷಿಸಿದೆ. ಮೈತ್ರಿಕೂಟದ ಪಾಲುದಾರ ಲಿಬರಲ್ ಡೆಮಾಕ್ರಟಿಕ್ ಪಾರ್ಟಿಯ ಅಧ್ಯಕ್ಷ, ನಿವೃತ್ತ ಕರ್ನಲ್ ಓಲಿ ಅಹ್ಮದ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ.
ಹಿಂದಿನ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಜುಲೈ 24ರಂದು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅಧ್ಯಕ್ಷೀಯ ಚುನಾವಣೆ ಅನಿವಾರ್ಯವಾಗಿದೆ. ಅವರ ಅವಧಿ ಮುಗಿಯಲು ಇನ್ನೂ ಸುಮಾರು ಎರಡು ವರ್ಷ ಬಾಕಿ ಇತ್ತು.
ಅಧ್ಯಕ್ಷ ಸ್ಥಾನ ತೆರವಾದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಸಂವಿಧಾನದ ಪ್ರಕಾರ ಸಂಸತ್ ಸ್ಪೀಕರ್ ಹಾಫಿಜ್ ಉದ್ದೀನ್ ಅಹ್ಮದ್ ಅವರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿಎನ್‌ಪಿಗೆ ಬಹುಮತದ ಬಲ
ಫೆಬ್ರವರಿ 12ರಂದು ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಬಿಎನ್‌ಪಿ ಪ್ರಸ್ತುತ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತ ಹೊಂದಿದೆ. ಹೀಗಾಗಿ ಮಿರ್ಜಾ ಫಖ್ರುಲ್ ಇಸ್ಲಾಂ ಆಲಂಘೀರ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಬಲವಾಗಿದೆ.


