ಭಾರತಕ್ಕೆ ರೈಲು ಸಂಪರ್ಕದ ಹೊಸ ಪ್ರಸ್ತಾವ: ಹೋರ್ಮುಜ್, ಬೊಸ್ಫರಸ್ ಜಲಮಾರ್ಗ ಅವಲಂಬನೆ ತಗ್ಗಿಸಲು ರಷ್ಯಾ ಚಿಂತನೆ

1 Min Read
1 Min Read

ಮಾಸ್ಕೋ: ಪ್ರಮುಖ ಸಮುದ್ರ ಮಾರ್ಗಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ರಷ್ಯಾ, ಹಿಂದೂ ಮಹಾಸಾಗರ ಹಾಗೂ ಭಾರತವನ್ನು ಸಂಪರ್ಕಿಸುವ ಪರ್ಯಾಯ ರೈಲು ಮಾರ್ಗದ ಸಾಧ್ಯತೆಯನ್ನು ಪರಿಶೀಲಿಸುವ ಪ್ರಸ್ತಾವ ಮುಂದಿಟ್ಟಿದೆ.

ರಷ್ಯಾದ ಉಪ ಪ್ರಧಾನಮಂತ್ರಿ ಮರಾತ್ ಖುಸ್ನುಲ್ಲಿನ್ ಅವರು, ಪರ್ಯಾಯ ಭೂಮಾರ್ಗಗಳನ್ನು ಅಭಿವೃದ್ಧಿಪಡಿಸುವುದರಿಂದ ಆಯಕಟ್ಟಿನ ಎರಡು ಪ್ರಮುಖ ಜಲಮಾರ್ಗಗಳಾದ ಹೋರ್ಮುಜ್ ಜಲಸಂಧಿ ಮತ್ತು ಬೊಸ್ಫರಸ್ ಜಲಸಂಧಿಗೆ ಸಂಬಂಧಿಸಿದ ಅಪಾಯಗಳನ್ನು ಕಡಿಮೆ ಮಾಡಲು ನೆರವಾಗಬಹುದು ಎಂದು ಹೇಳಿದ್ದಾರೆ.

ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ತುರ್ಕ್‌ಮೆನಿಸ್ತಾನ್, ಇರಾನ್ ಹಾಗೂ ಅಫ್ಘಾನಿಸ್ತಾನದ ಮೂಲಕ ಹಾದುಹೋಗುವ ರೈಲು ಮಾರ್ಗಗಳನ್ನು ಬಳಸಿಕೊಂಡು ಭಾರತಕ್ಕೆ ಸಂಪರ್ಕ ಕಲ್ಪಿಸುವ ಸಾಧ್ಯತೆಯನ್ನು ಪರಿಶೀಲಿಸಬಹುದು ಎಂದು ಖುಸ್ನುಲ್ಲಿನ್ ತಿಳಿಸಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಹೋರ್ಮುಜ್ ಜಲಸಂಧಿಯ ಮೂಲಕ ಸಾಗುವ ಸರಕು ಸಾಗಣೆ ಮೇಲೆ ವ್ಯತ್ಯಯ ಉಂಟಾಗಿರುವ ಸಂದರ್ಭದಲ್ಲಿ ರಷ್ಯಾದ ಈ ಪ್ರಸ್ತಾವ ಮಹತ್ವ ಪಡೆದುಕೊಂಡಿದೆ.

ಭಾರತ–ರಷ್ಯಾ ವ್ಯಾಪಾರಕ್ಕೆ ಪರ್ಯಾಯ ಸಂಪರ್ಕ?

ಪ್ರಸ್ತಾಪಿತ ರೈಲು ಸಂಪರ್ಕ ಕಾರ್ಯರೂಪಕ್ಕೆ ಬಂದರೆ, ಮಧ್ಯ ಏಷ್ಯಾ ಮತ್ತು ದಕ್ಷಿಣ ಏಷ್ಯಾ ಮೂಲಕ ರಷ್ಯಾಕ್ಕೆ ಹಿಂದೂ ಮಹಾಸಾಗರದತ್ತ ಸಾಗಲು ಪರ್ಯಾಯ ಭೂಮಾರ್ಗ ದೊರೆಯುವ ಸಾಧ್ಯತೆಯಿದೆ. ಇದರಿಂದ ಸಮುದ್ರ ಮಾರ್ಗಗಳ ಮೇಲಿನ ಅವಲಂಬನೆ ತಗ್ಗಿಸುವುದರ ಜೊತೆಗೆ ರಷ್ಯಾದ ವ್ಯಾಪಾರ ಮತ್ತು ಸರಕು ಸಾಗಣೆಗೆ ಹೊಸ ಅವಕಾಶಗಳು ಸೃಷ್ಟಿಯಾಗಬಹುದು.

ಈ ಯೋಜನೆ ಜಾರಿಗೆ ಬಂದಲ್ಲಿ ಅದರ ಪರಿಣಾಮ ಕೇವಲ ಸಾರಿಗೆ ಕ್ಷೇತ್ರಕ್ಕೆ ಸೀಮಿತವಾಗದೆ, ಭಾರತ–ರಷ್ಯಾ ವ್ಯಾಪಾರ, ಮಧ್ಯ ಏಷ್ಯಾದ ಸಂಪರ್ಕ ಹಾಗೂ ಪ್ರಾದೇಶಿಕ ಭೌಗೋಳಿಕ-ರಾಜಕೀಯ ಸಮೀಕರಣಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

Share This Article