ನವದೆಹಲಿ: ಆಯುರ್ವೇದ ಸೇರಿದಂತೆ ಆಯುಷ್ ಸೇವಾ ಕ್ಷೇತ್ರವು ದೇಶದಲ್ಲಿ ಮಹಿಳೆಯರಿಗೆ ಉದ್ಯೋಗ ಮತ್ತು ಉದ್ಯಮಶೀಲತೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿರುವ ಪ್ರಮುಖ ವಲಯವಾಗಿ ಬೆಳೆಯುತ್ತಿದೆ. ಆಯುಷ್ ಸೇವಾ ಕ್ಷೇತ್ರದ ಒಟ್ಟು ಉದ್ಯೋಗಿಗಳ ಪೈಕಿ ಮಹಿಳೆಯರ ಪಾಲು ಶೇ.43ರಷ್ಟಿದ್ದು, ಸಂಘಟಿತ ವಲಯದ ಹಲವು ವಿಭಾಗಗಳಲ್ಲಿ ಅವರ ಪ್ರಾತಿನಿಧ್ಯ ಶೇ.50ರ ಗಡಿ ದಾಟಿದೆ.
ಕೇಂದ್ರ ಆಯುಷ್ ಸಚಿವಾಲಯದ ಇತ್ತೀಚಿನ ಅಂದಾಜಿನ ಪ್ರಕಾರ, ಆರೋಗ್ಯ ಸೇವೆ, ವೆಲ್ನೆಸ್, ಶಿಕ್ಷಣ ಹಾಗೂ ಸಂಬಂಧಿತ ಚಟುವಟಿಕೆಗಳ ಮೂಲಕ ಆಯುಷ್ ಕ್ಷೇತ್ರವು ದೇಶದಲ್ಲಿ ಸುಮಾರು 17.6 ಲಕ್ಷ ಜೀವನೋಪಾಯಗಳಿಗೆ ನೇರವಾಗಿ ಬೆಂಬಲ ನೀಡುತ್ತಿದೆ.
ಆಸ್ಪತ್ರೆಗಳಿಂದ ವೆಲ್ನೆಸ್ ಕೇಂದ್ರಗಳವರೆಗೆ ಮಹಿಳೆಯರ ಪ್ರಾಬಲ್ಯ
ಆಯುಷ್ ಕ್ಷೇತ್ರದ ವಿವಿಧ ಸಂಘಟಿತ ವಿಭಾಗಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಗಮನಾರ್ಹವಾಗಿ ಹೆಚ್ಚಿದೆ. ವೆಲ್ನೆಸ್ ಕೇಂದ್ರಗಳು ಹಾಗೂ ಸ್ಪಾಗಳಲ್ಲಿ ಮಹಿಳಾ ಉದ್ಯೋಗಿಗಳ ಪ್ರಮಾಣ ಶೇ.60ಕ್ಕೂ ಹೆಚ್ಚು ಇದ್ದರೆ, ಶಿಕ್ಷಣ ಸಂಸ್ಥೆಗಳಲ್ಲಿ ಶೇ.58, ಡೇ-ಕೇರ್ ಕೇಂದ್ರಗಳಲ್ಲಿ ಶೇ.57 ಹಾಗೂ ಆಸ್ಪತ್ರೆಗಳಲ್ಲಿ ಶೇ.53ರಷ್ಟಿದೆ.
ಇದರಿಂದ ಆಯುಷ್ ಕ್ಷೇತ್ರವು ಮಹಿಳೆಯರ ಆರ್ಥಿಕ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದರ ಜತೆಗೆ ಆರೋಗ್ಯ, ಶಿಕ್ಷಣ, ಸಂಶೋಧನೆ ಮತ್ತು ವೆಲ್ನೆಸ್ ವಲಯಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ ಎಂಬುದು ಸ್ಪಷ್ಟವಾಗುತ್ತಿದೆ.
“ಉದ್ಯೋಗ, ಕೌಶಲ್ಯಾಭಿವೃದ್ಧಿಗೆ ಹೊಸ ದಾರಿ”
ಆಯುಷ್ ಸೇವಾ ಕ್ಷೇತ್ರದ ವಿಸ್ತರಣೆಯಿಂದ ಆರೋಗ್ಯ ಮತ್ತು ವೆಲ್ನೆಸ್ ಸೇವೆಗಳ ಜತೆಗೆ ಉದ್ಯೋಗ, ಉದ್ಯಮಶೀಲತೆ ಹಾಗೂ ಕೌಶಲ್ಯಾಭಿವೃದ್ಧಿಗೂ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ ಎಂದು ಕೇಂದ್ರ ಆಯುಷ್ ರಾಜ್ಯ ಸಚಿವ ಪ್ರತಾಪರಾವ್ ಜಾಧವ್ ಹೇಳಿದ್ದಾರೆ.
ಮಹಿಳೆಯರ ಹೆಚ್ಚಿನ ಪಾಲ್ಗೊಳ್ಳುವಿಕೆ ಈ ಕ್ಷೇತ್ರದ ವಿಸ್ತರಣೆಯಲ್ಲಿ ಪ್ರಮುಖ ಅಂಶವಾಗಿದ್ದು, ಸಂಘಟಿತ ಆಯುಷ್ ಸಂಸ್ಥೆಗಳ ಬೆಳವಣಿಗೆಯು ಸಮಗ್ರ ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವ ಸಾಧ್ಯತೆಯಿದೆ ಎಂದು ಸಚಿವಾಲಯ ತಿಳಿಸಿದೆ.
₹36.92 ಬಿಲಿಯನ್ ಡಾಲರ್ ಆರ್ಥಿಕ ಕ್ಷೇತ್ರ
ರಿಸರ್ಚ್ ಆ್ಯಂಡ್ ಇನ್ಫರ್ಮೇಷನ್ ಸಿಸ್ಟಂ ಫಾರ್ ಡೆವಲಪಿಂಗ್ ಕಂಟ್ರೀಸ್ (RIS) ನಡೆಸಿದ ಅಧ್ಯಯನದ ಪ್ರಕಾರ, 2024–25ನೇ ಸಾಲಿನಲ್ಲಿ ಆಯುಷ್ ಸೇವಾ ಕ್ಷೇತ್ರದ ಆರ್ಥಿಕ ಮೌಲ್ಯ 36.92 ಬಿಲಿಯನ್ ಅಮೆರಿಕನ್ ಡಾಲರ್ನಷ್ಟಿದೆ. 2022–23ರಿಂದ ಈ ಕ್ಷೇತ್ರವು ಶೇ.16.91ರ ಸಂಯುಕ್ತ ವಾರ್ಷಿಕ ಬೆಳವಣಿಗೆ ದರವನ್ನು ದಾಖಲಿಸಿದೆ.
ಆಯುರ್ವೇದವು ಆಯುಷ್ ವ್ಯವಸ್ಥೆಗಳ ಪೈಕಿ ಅತಿ ದೊಡ್ಡ ಆರ್ಥಿಕ ಪಾಲು ಹೊಂದಿದ್ದು, 17.73 ಬಿಲಿಯನ್ ಡಾಲರ್ ಆದಾಯದೊಂದಿಗೆ ಒಟ್ಟು ಆಯುಷ್ ಸೇವಾ ಆದಾಯದ ಸುಮಾರು ಶೇ.48ರಷ್ಟು ಪಾಲು ಹೊಂದಿದೆ.
2047ರ ವೇಳೆಗೆ ₹216–318 ಬಿಲಿಯನ್ ಡಾಲರ್ ನಿರೀಕ್ಷೆ
ಆಯುಷ್ ಸೇವಾ ಕ್ಷೇತ್ರದ ಬೆಳವಣಿಗೆ ಮುಂದುವರಿದರೆ 2047ರ ವೇಳೆಗೆ ಇದರ ಆರ್ಥಿಕ ಮೌಲ್ಯ 216ರಿಂದ 318 ಬಿಲಿಯನ್ ಅಮೆರಿಕನ್ ಡಾಲರ್ವರೆಗೆ ತಲುಪುವ ಸಾಧ್ಯತೆಯಿದೆ ಎಂದು ಅಧ್ಯಯನ ಅಂದಾಜಿಸಿದೆ. ಮೂಲಸೌಕರ್ಯ, ಗುಣಮಟ್ಟದ ಮಾನದಂಡಗಳು, ಕೌಶಲ್ಯಾಭಿವೃದ್ಧಿ, ಡಿಜಿಟಲ್ ಸಾಮರ್ಥ್ಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆ ಪ್ರವೇಶವನ್ನು ಮತ್ತಷ್ಟು ಬಲಪಡಿಸುವುದು ಈ ಬೆಳವಣಿಗೆಗೆ ಪ್ರಮುಖವಾಗಲಿದೆ.
ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆ, ವೆಲ್ನೆಸ್, ಶಿಕ್ಷಣ, ವೈದ್ಯಕೀಯ ಪ್ರವಾಸೋದ್ಯಮ, ಸಂಶೋಧನೆ ಮತ್ತು ಡಿಜಿಟಲ್ ಆರೋಗ್ಯ ಸೇವೆಗಳಲ್ಲಿ ಆಯುಷ್ ಕ್ಷೇತ್ರ ಮತ್ತಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.


