ಮಾಸ್ ಇಮೇಜ್‌ಗೆ ಬ್ರೇಕ್, ರೊಮ್ಯಾನ್ಸ್‌ಗೆ ಎಂಟ್ರಿ: ‘ಕೆಮಿಸ್ಟ್ರಿ’ಯಲ್ಲಿ ಧ್ರುವ ಸರ್ಜಾ

2 Min Read
2 Min Read

ಬೆಂಗಳೂರು: ಆಕ್ಷನ್ ಪ್ರಧಾನ ಸಿನಿಮಾಗಳ ಮೂಲಕವೇ ಹೆಚ್ಚು ಗುರುತಿಸಿಕೊಂಡಿರುವ ಧ್ರುವ ಸರ್ಜಾ ಇದೀಗ ತಮ್ಮ ಸಿನಿ ಪಯಣದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ‘ಕೆಮಿಸ್ಟ್ರಿ’ ಹೆಸರಿನ ರೊಮ್ಯಾಂಟಿಕ್ ಎಂಟರ್‌ಟೈನರ್‌ನಲ್ಲಿ ಅವರು ಈವರೆಗೆ ಕಾಣಿಸಿಕೊಂಡಿರುವ ಮಾಸ್ ಹೀರೋ ಶೈಲಿಗಿಂತ ಸಂಪೂರ್ಣ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ‘ತತ್ಸಮ ತದ್ಭವ’ ಮೂಲಕ ನಿರ್ದೇಶಕರಾಗಿ ಗಮನ ಸೆಳೆದಿರುವ ವಿಶಾಲ್ ಆತ್ರೇಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಧ್ರುವ ಸರ್ಜಾ ಅವರ ಜನ್ಮದಿನದ ಅಂಗವಾಗಿ ಬಿಡುಗಡೆಯಾದ ಚಿತ್ರದ ಘೋಷಣಾ ಝಲಕ್‌, ಪ್ರೀತಿ, ಕೋಪ, ಕಾಳಜಿ, ಜಗಳ, ಬ್ರೇಕಪ್ ಮತ್ತು ಪ್ಯಾಚ್‌ಅಪ್‌ನಂತಹ ಸಂಬಂಧಗಳ ಹಲವು ಮುಖಗಳನ್ನು ‘ಕೆಮಿಸ್ಟ್ರಿ’ ಎಂಬ ಒಂದೇ ಪದದ ಮೂಲಕ ಕಟ್ಟಿಕೊಡುವ ಸುಳಿವು ನೀಡಿದೆ.

‘ಕೆಮಿಸ್ಟ್ರಿ’ ಎಂದರೆ ಕೇವಲ ಆಕರ್ಷಣೆ ಅಲ್ಲ

ಚಿತ್ರದ ಶೀರ್ಷಿಕೆಯ ಹಿಂದಿನ ಆಲೋಚನೆ ಕುರಿತು ಮಾತನಾಡಿರುವ ನಿರ್ದೇಶಕ ವಿಶಾಲ್ ಆತ್ರೇಯ, ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧವನ್ನು ಕೇವಲ ಆಕರ್ಷಣೆ ಅಥವಾ ಪ್ರೀತಿಯಿಂದ ವಿವರಿಸಲು ಸಾಧ್ಯವಿಲ್ಲ. ಅವರ ನಡುವಿನ ಕೆಲವು ಭಾವನೆಗಳು ಮತ್ತು ಹೊಂದಾಣಿಕೆಗಳಿಗೆ ನಿಖರವಾದ ವಿವರಣೆ ಸಿಗದಿದ್ದರೂ ಅದನ್ನು ‘ಕೆಮಿಸ್ಟ್ರಿ’ ಎನ್ನಬಹುದು ಎಂಬ ಆಶಯದಲ್ಲಿ ಕಥೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

ಧ್ರುವ ಸರ್ಜಾಗೆ ಇಲ್ಲ ‘ಲೌಡ್’ ಹೀರೋಯಿಸಂ

‘ಕೆಮಿಸ್ಟ್ರಿ’ಯಲ್ಲಿ ಧ್ರುವ ಸರ್ಜಾ ಅವರ ಪಾತ್ರವನ್ನು ಸಾಂಪ್ರದಾಯಿಕ ಮಾಸ್ ಹೀರೋ ಮಾದರಿಯಲ್ಲಿ ಕಟ್ಟಿಕೊಡಲಾಗುವುದಿಲ್ಲ. ಭರ್ಜರಿ ಎಲಿವೇಷನ್ ದೃಶ್ಯಗಳು, ಅಬ್ಬರದ ಹೀರೋಯಿಸಂ ಮತ್ತು ಹೈ-ವೋಲ್ಟೇಜ್ ಆಕ್ಷನ್‌ಗಿಂತ ಸಹಜ, ಮೃದು ಹಾಗೂ ಪ್ರೇಕ್ಷಕರಿಗೆ ಹತ್ತಿರವಾಗುವ ಪಾತ್ರಕ್ಕೆ ನಿರ್ದೇಶಕರು ಒತ್ತು ನೀಡಿದ್ದಾರೆ.

ಇಲ್ಲಿಯವರೆಗೆ ಧ್ರುವ ಅವರನ್ನು ನೋಡಿರುವ ರೀತಿಗಿಂತ ಭಿನ್ನವಾದ, ಅವರ ನೈಸರ್ಗಿಕ ಮತ್ತು ಆಕರ್ಷಕ ವ್ಯಕ್ತಿತ್ವವನ್ನು ತೆರೆಗೆ ತರುವ ಪ್ರಯತ್ನ ಚಿತ್ರದಲ್ಲಿದೆ.

ರೊಮ್ಯಾಂಟಿಕ್ ಲುಕ್‌ಗಾಗಿ ಧ್ರುವ ಸರ್ಜಾ ಮೇಕ್‌ಓವರ್

ರೊಮ್ಯಾಂಟಿಕ್ ಕಥಾಹಂದರಕ್ಕೆ ಹೊಂದುವಂತೆ ಧ್ರುವ ಸರ್ಜಾ ತಮ್ಮ ದೇಹದ ತೂಕವನ್ನು ಇಳಿಸಿಕೊಂಡು ಸ್ಲಿಮ್ ಹಾಗೂ ಯಂಗ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಾತ್ರದ ಸ್ವಭಾವ ಮತ್ತು ಸಿನಿಮಾದ ದೃಶ್ಯಭಾಷೆಗೆ ಹೊಂದುವಂತೆ ಅವರ ಸಂಪೂರ್ಣ ಲುಕ್‌ನಲ್ಲಿ ಬದಲಾವಣೆ ತರಲಾಗುತ್ತಿದೆ.

ನಭಾ ನಟೇಶ್ ಮತ್ತೆ ಕನ್ನಡಕ್ಕೆ

‘ಕೆಮಿಸ್ಟ್ರಿ’ಯ ಮತ್ತೊಂದು ಪ್ರಮುಖ ಆಕರ್ಷಣೆ ನಭಾ ನಟೇಶ್. ‘ವಜ್ರಕಾಯ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದ ನಭಾ, ಬಳಿಕ ತೆಲುಗು ಚಿತ್ರರಂಗದಲ್ಲಿ ಗಮನ ಸೆಳೆದಿದ್ದರು. ಇದೀಗ ಹಲವು ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ಮರಳುತ್ತಿದ್ದು, ಇದೇ ಮೊದಲ ಬಾರಿಗೆ ಧ್ರುವ ಸರ್ಜಾ ಜೊತೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದ ಉಳಿದ ತಾರಾಗಣವನ್ನು ಚಿತ್ರತಂಡ ಅಂತಿಮಗೊಳಿಸುತ್ತಿದೆ. ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಹಾಗೂ ವೈದ್ಯ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಚಿತ್ರವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ.

ಅಚ್ಚ ಕನ್ನಡದ ಸೊಗಡಿನ ಕಥೆ

ಕಥೆಯ ಭಾವನೆ ಸಾರ್ವತ್ರಿಕವಾಗಿದ್ದರೂ, ಸಿನಿಮಾ ಸಂಪೂರ್ಣವಾಗಿ ಕನ್ನಡ ಪ್ರೇಕ್ಷಕರ ಅಭಿರುಚಿ ಮತ್ತು ಸ್ಥಳೀಯ ಸಂವೇದನೆಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗುತ್ತಿದೆ ಎಂದು ನಿರ್ದೇಶಕ ವಿಶಾಲ್ ಆತ್ರೇಯ ಹೇಳಿದ್ದಾರೆ. ಹೀಗಾಗಿ ಧ್ರುವ–ನಭಾ ಜೋಡಿಯ ಹೊಸ ಕಾಂಬಿನೇಷನ್ ಮಾತ್ರವಲ್ಲದೆ, ಕಥೆಯ ನಿರೂಪಣೆಯೂ ಚಿತ್ರದ ಪ್ರಮುಖ ಆಕರ್ಷಣೆಯಾಗುವ ನಿರೀಕ್ಷೆಯಿದೆ.

Share This Article