ಮಧ್ಯಪ್ರದೇಶದಲ್ಲಿ ಹೈನುಗಾರಿಕೆ, ಹಾಲು ಉತ್ಪಾದನೆ ಮತ್ತು ಗ್ರಾಮೀಣ ಸಹಕಾರ ಕ್ಷೇತ್ರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಭೋಪಾಲ್ನಲ್ಲಿ ಗೋಪಾಲಕ ಸಮ್ಮೇಳನ ಆಯೋಜಿಸಲಾಗಿದೆ. ಅಕ್ಟೋಬರ್ 3ರಂದು ಭೋಪಾಲ್ನ ದಸರಾ ಮೈದಾನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಕೂಡ ಉಪಸ್ಥಿತರಿರಲಿದ್ದಾರೆ.
ಮಹಿಳಾ ಪಶುಪಾಲಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಪಶುಪಾಲನೆ ಮತ್ತು ಹೈನುಗಾರಿಕೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ‘ಗೋಪಾಲಕ ದೀದಿ’ಗಳಿಗೆ ಸನ್ಮಾನ ನಡೆಯಲಿದೆ. ಡಾ. ಭೀಮರಾವ್ ಅಂಬೇಡ್ಕರ್ ಕಾಮಧೇನು ಯೋಜನೆಯಡಿ ಇಬ್ಬರು ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸುವ ಕಾರ್ಯಕ್ರಮವೂ ಇರಲಿದೆ.
₹255 ಕೋಟಿ ಹಾಲು ಸಂಸ್ಕರಣಾ ಘಟಕಕ್ಕೆ ಶಂಕುಸ್ಥಾಪನೆ
ಗೋಪಾಲಕ ಸಮ್ಮೇಳನದ ವೇಳೆ ಮಧ್ಯಪ್ರದೇಶದ ಹೈನುಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಯೋಜನೆಗಳಿಗೆ ಚಾಲನೆ ನೀಡಲಾಗುತ್ತದೆ.
ಉಜ್ಜಯಿನಿಯಲ್ಲಿ ದಿನಕ್ಕೆ 3 ಲಕ್ಷ ಲೀಟರ್ ಸಾಮರ್ಥ್ಯದ ಹಾಲು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ₹255 ಕೋಟಿ ವೆಚ್ಚವಾಗಲಿದ್ದು, ಅಮಿತ್ ಶಾ ಅವರು ಇದರ ಶಂಕುಸ್ಥಾಪನೆಯನ್ನು ಡಿಜಿಟಲ್ ಮೂಲಕ ನೆರವೇರಿಸಲಿದ್ದಾರೆ.
ಭೋಪಾಲ್ನಲ್ಲಿ ದಿನಕ್ಕೆ 40,000 ಲೀಟರ್ ಸಾಮರ್ಥ್ಯದ ₹16.5 ಕೋಟಿ ವೆಚ್ಚದ ಉತ್ಪನ್ನ ಡೇರಿ ಘಟಕವನ್ನು ಉದ್ಘಾಟಿಸಲಾಗುತ್ತದೆ. ಅಲ್ಲದೆ, ₹12.42 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ರಾಜ್ಯಮಟ್ಟದ ಕೇಂದ್ರ ಪ್ರಯೋಗಾಲಯಕ್ಕೂ ಚಾಲನೆ ನೀಡಲಾಗುತ್ತದೆ. ಶಿವಪುರಿಯ ಮಿನಿ ಡೇರಿ ಘಟಕದ ₹6.5 ಕೋಟಿ ವೆಚ್ಚದ ಬಲವರ್ಧನಾ ಕಾಮಗಾರಿಗೂ ಡಿಜಿಟಲ್ ಮೂಲಕ ಚಾಲನೆ ನೀಡಲಾಗುತ್ತದೆ.
ಹಾಲು ಉತ್ಪಾದಕರಿಗೆ ಬೋನಸ್, ಸಹಕಾರಿ ಸದಸ್ಯರಿಗೆ ಲಾಭಾಂಶ
ಭೋಪಾಲ್ ಮತ್ತು ಇಂದೋರ್ ಹಾಲು ಒಕ್ಕೂಟಗಳ ಸದಸ್ಯರಿಗೆ ಕಾರ್ಯಕ್ರಮದ ವೇಳೆ ಬೋನಸ್ ಮೊತ್ತವನ್ನು ನೇರವಾಗಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಗೋಶಾಲೆಗಳಿಗೂ ಆರ್ಥಿಕ ನೆರವು ನೀಡಲಾಗುತ್ತದೆ.
ಇದರ ಜತೆಗೆ ಡೇರಿ ಸಹಕಾರ ಸಂಘಗಳ ಸದಸ್ಯರಿಗೆ ಒಟ್ಟು ₹15.10 ಕೋಟಿ ಲಾಭಾಂಶ ವಿತರಿಸಲಾಗುತ್ತದೆ ಎಂದು ಕೇಂದ್ರ ಸಹಕಾರ ಸಚಿವಾಲಯ ತಿಳಿಸಿದೆ.
ಮಧ್ಯಪ್ರದೇಶದಲ್ಲಿ ಹಾಲು ಸಂಸ್ಕರಣೆ ಸಾಮರ್ಥ್ಯ ಹಾಗೂ ಡೇರಿ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ.


