ಹಳೆಯ ನೋಟು, ನಾಣ್ಯ ಖರೀದಿ ಬಗ್ಗೆ ಮೋದಿ ಘೋಷಣೆ? ವೈರಲ್ ವಿಡಿಯೋ ಕುರಿತು PIB ಮಹತ್ವದ ಸ್ಪಷ್ಟನೆ

1 Min Read
1 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹಳೆಯ ನೋಟುಗಳು ಹಾಗೂ ನಾಣ್ಯಗಳನ್ನು ಖರೀದಿಸುವ ಕುರಿತು ಯಾವುದೇ ಘೋಷಣೆ ಮಾಡಿದ್ದಾರೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋ (PIB)ಯ ಫ್ಯಾಕ್ಟ್ ಚೆಕ್ ಘಟಕ ಈ ವಿಡಿಯೋಗಳನ್ನು ನಕಲಿ ಎಂದು ಗುರುತಿಸಿದ್ದು, ಇವುಗಳನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಿರುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹಳೆಯ ನೋಟು ಅಥವಾ ನಾಣ್ಯಗಳ ಖರೀದಿ ಕುರಿತು ಇಂತಹ ಯಾವುದೇ ಘೋಷಣೆ ಮಾಡಿಲ್ಲ ಎಂದು ಘಟಕ ಸ್ಪಷ್ಟಪಡಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಆಕರ್ಷಕ ಶೀರ್ಷಿಕೆಗಳು ಹಾಗೂ ದೃಶ್ಯಗಳೊಂದಿಗೆ ಇಂತಹ ವಿಡಿಯೋಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ PIB ಸೂಚಿಸಿದೆ. ಅನುಮಾನಾಸ್ಪದ ವಿಡಿಯೋಗಳು, ಸಂದೇಶಗಳು ಅಥವಾ ಲಿಂಕ್‌ಗಳನ್ನು ಪರಿಶೀಲನೆ ಇಲ್ಲದೆ ಇತರರಿಗೆ ಹಂಚಿಕೊಳ್ಳಬಾರದು ಅಥವಾ ಫಾರ್ವರ್ಡ್ ಮಾಡಬಾರದು ಎಂದು ಸಲಹೆ ನೀಡಿದೆ.

ಕೇಂದ್ರ ಸರ್ಕಾರದ ಯೋಜನೆಗಳು, ನೀತಿಗಳು ಅಥವಾ ಪ್ರಧಾನಿಯವರ ಘೋಷಣೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿದುಕೊಳ್ಳಲು ಅಧಿಕೃತ ಸರ್ಕಾರಿ ಮೂಲಗಳನ್ನೇ ಅವಲಂಬಿಸುವುದು ಸೂಕ್ತ ಎಂದು PIB ಫ್ಯಾಕ್ಟ್ ಚೆಕ್ ಘಟಕ ತಿಳಿಸಿದೆ. PIBಯ Fact Check Unit ಅಧಿಕೃತ ಮೂಲಗಳೊಂದಿಗೆ ಮಾಹಿತಿಯನ್ನು ಪರಿಶೀಲಿಸಿ ತಪ್ಪು ಅಥವಾ ದಾರಿತಪ್ಪಿಸುವ ಮಾಹಿತಿಯ ಕುರಿತು ಸಾರ್ವಜನಿಕರಿಗೆ ಸ್ಪಷ್ಟನೆ ನೀಡುತ್ತದೆ.

ಇತ್ತೀಚಿನ ವರ್ಷಗಳಲ್ಲಿ AI ಮೂಲಕ ಸೃಷ್ಟಿಯಾಗುವ ನಕಲಿ ಚಿತ್ರಗಳು, ವಿಡಿಯೋಗಳು ಹಾಗೂ ಧ್ವನಿ ಸಂದೇಶಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುವ ಯಾವುದೇ ಮಹತ್ವದ ಸರ್ಕಾರಿ ಘೋಷಣೆಯನ್ನು ಅಧಿಕೃತ ಮೂಲದಲ್ಲಿ ಖಚಿತಪಡಿಸಿಕೊಂಡ ಬಳಿಕವೇ ನಂಬುವುದು ಮತ್ತು ಹಂಚಿಕೊಳ್ಳುವುದು ಅಗತ್ಯವಾಗಿದೆ.

Share This Article