ಸಂಗೀತ ಪ್ರಪಂಚಕ್ಕೆ ಅಚ್ಚರಿ ತಂದ ನಿರ್ಧಾರ
ರಾಷ್ಟ್ರ ಪ್ರಶಸ್ತಿ ವಿಜೇತ, ಜಾಗತಿಕ ಖ್ಯಾತಿಯ ಗಾಯಕ ಅರ್ಜಿತ್ ಸಿಂಗ್ ಪ್ಲೇಬ್ಯಾಕ್ ಗಾಯನದಿಂದ ನಿವೃತ್ತಿ ಘೋಷಿಸಿರುವುದು ಸಂಗೀತ ಪ್ರೇಮಿಗಳಿಗೆ ಭಾರೀ ಅಚ್ಚರಿ ಮೂಡಿಸಿದೆ. ಮಂಗಳವಾರ ಸಂಜೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ ಪೋಸ್ಟ್‌ಗಳ ಮೂಲಕ ಅವರು ಈ ಮಹತ್ವದ ನಿರ್ಧಾರವನ್ನು ಅಧಿಕೃತವಾಗಿ ತಿಳಿಸಿದರು.
ಕಳೆದ 15 ವರ್ಷಗಳಿಂದ ಅಪಾರ ಪ್ರೀತಿ, ಬೆಂಬಲ ನೀಡಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ ಅರ್ಜಿತ್,
“ಇನ್ನು ಮುಂದೆ ಪ್ಲೇಬ್ಯಾಕ್ ಗಾಯಕನಾಗಿ ಯಾವುದೇ ಹೊಸ ಹಾಡುಗಳನ್ನು ಸ್ವೀಕರಿಸುವುದಿಲ್ಲ. ಈ ಅಧ್ಯಾಯವನ್ನು ಇಲ್ಲಿಗೆ ಮುಕ್ತಾಯಗೊಳಿಸುತ್ತಿದ್ದೇನೆ. ಇದು ಅದ್ಭುತವಾದ ಪ್ರಯಾಣವಾಗಿತ್ತು,” ಎಂದು ಬರೆದಿದ್ದಾರೆ.
ನಿವೃತ್ತಿಯ ಹಿಂದೆ ಇರುವ ನಿಖರ ಕಾರಣವನ್ನು ವಿವರಿಸದಿದ್ದರೂ,
“ಈ ನಿರ್ಧಾರಕ್ಕೆ ಹಲವು ಕಾರಣಗಳಿವೆ. ಇದನ್ನು ಮಾಡುವ ಬಗ್ಗೆ ಬಹುಕಾಲದಿಂದ ಯೋಚಿಸುತ್ತಿದ್ದೆ. ಈಗ ಕೊನೆಗೂ ಧೈರ್ಯ ಬಂದಿದೆ. ಸ್ವಲ್ಪ ಬೋರ್ ಆಗಿದೆ. ಬದುಕಲು, ಬೆಳೆಯಲು ಬೇರೆ ರೀತಿಯ ಸಂಗೀತ ಬೇಕಾಗಿದೆ,” ಎಂದು ಮನದಾಳದ ಮಾತು ಹಂಚಿಕೊಂಡಿದ್ದಾರೆ.
ಆದರೆ ಈಗಾಗಲೇ ಕೈಗೆತ್ತಿಕೊಂಡಿರುವ ಎಲ್ಲ ಹಾಡುಗಳನ್ನು ಪೂರ್ಣಗೊಳಿಸುವುದಾಗಿ ಸ್ಪಷ್ಟಪಡಿಸಿರುವ ಅವರು, 2026ರಲ್ಲಿ ಇನ್ನೂ ಕೆಲವು ಹಾಡುಗಳು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಸಂಗೀತದಿಂದ ದೂರವಲ್ಲ ಎಂದ ಅರ್ಜಿತ್
ಪ್ಲೇಬ್ಯಾಕ್ ಗಾಯನದಿಂದ ಹಿಂದೆ ಸರಿದರೂ, ಸಂಗೀತದಿಂದ ಸಂಪೂರ್ಣವಾಗಿ ದೂರವಿರುವುದಿಲ್ಲ ಎಂದು ಅರ್ಜಿತ್ ಸ್ಪಷ್ಟಪಡಿಸಿದ್ದಾರೆ.
“ನಾನು ಸಂಗೀತ ರಚನೆ ನಿಲ್ಲಿಸುವುದಿಲ್ಲ. ದೇವರು ನನಗೆ ಅಪಾರ ದಯೆ ತೋರಿದ್ದಾನೆ. ಉತ್ತಮ ಸಂಗೀತದ ಅಭಿಮಾನಿ ನಾನು. ಮುಂದಿನ ದಿನಗಳಲ್ಲಿ ಕಲಿಯುತ್ತಾ, ಸ್ವತಂತ್ರ ಕಲಾವಿದನಾಗಿ ನನ್ನದೇ ರೀತಿಯಲ್ಲಿ ಕೆಲಸ ಮಾಡುತ್ತೇನೆ,” ಎಂದು ಅವರು ಹೇಳಿದ್ದಾರೆ.
2021ರಲ್ಲಿ ‘ಪಗ್ಲೈಟ್’ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿಯೂ ಅರ್ಜಿತ್ ಪಾದಾರ್ಪಣೆ ಮಾಡಿದ್ದು, ಆ ಆಲ್ಬಮ್ ತನ್ನ ಸಂಯೋಜನೆ ಮತ್ತು ರಾಗಗಳ ವೈಶಿಷ್ಟ್ಯದಿಂದ ವಿಮರ್ಶಕರ ಮೆಚ್ಚುಗೆ ಗಳಿಸಿತ್ತು.
ಉದ್ಯಮದಲ್ಲಿ ಚರ್ಚೆಗೆ ಕಾರಣವಾದ ನಿರ್ಧಾರ
ಚಿತ್ರರಂಗದಲ್ಲಿ ಅತೀ ಸಕ್ರಿಯ ಹಾಗೂ ಬೇಡಿಕೆಯ ಪ್ಲೇಬ್ಯಾಕ್ ಗಾಯಕನಾಗಿದ್ದ ಅರ್ಜಿತ್ ಅವರ ಈ ನಿರ್ಧಾರ ಇದೀಗ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಮೂಲಗಳ ಪ್ರಕಾರ, ರಾಯಲ್ಟಿ ಮತ್ತು ಕಾಪಿರೈಟ್ ಸೇರಿದಂತೆ ಹಲವು ವಿಷಯಗಳಲ್ಲಿ ಸಂಗೀತ ಲೇಬಲ್‌ಗಳೊಂದಿಗೆ ಉಂಟಾದ ಭಿನ್ನಾಭಿಪ್ರಾಯಗಳು ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.
ಸಾಮಾಜಿಕ ವಿಷಯಗಳ ಕುರಿತು ಧ್ವನಿಯೆತ್ತುತ್ತಿದ್ದ ಕೆಲವೇ ಕಲಾವಿದರಲ್ಲಿ ಅರ್ಜಿತ್ ಒಬ್ಬರು. ಪ್ರಶಸ್ತಿ ಸಮಾರಂಭದ ನಿರೂಪಣೆ ಕುರಿತು ನೀಡಿದ್ದ ಹೇಳಿಕೆಯ ಬಳಿಕ ಸಲ್ಮಾನ್ ಖಾನ್ ಜೊತೆ ಅವರ ಸಂಬಂಧ ತಣ್ಣಗಾಗಿತ್ತು. ಹಲವು ವರ್ಷಗಳ ಕಾಲ ಸಲ್ಮಾನ್ ಸಿನಿಮಾಗಳಿಗೆ ಹಾಡದ ಅರ್ಜಿತ್, 2023ರ ‘ಟೈಗರ್ 3’ ಮೂಲಕ ಮತ್ತೆ ಧ್ವನಿ ನೀಡಿದ್ದಾರೆ.
ಇತ್ತೀಚೆಗೆ ಸಲ್ಮಾನ್ ಖಾನ್ ಅಭಿನಯದ ‘ಬ್ಯಾಟಲ್ ಆಫ್ ಗಲ್ವಾನ್’ ಚಿತ್ರದ ‘ಮಾತೃಭೂಮಿ’ ಹಾಗೂ ಶಾಹಿದ್ ಕಪೂರ್ ನಟನೆಯ ‘ಓ ರೋಮಿಯೋ’ ಚಿತ್ರದ ‘ಹಮ್ ತೋ ತೆರೆ ಲಿಯೇ ಹಿ ಥೇ’ ಹಾಡುಗಳಿಗೆ ಅರ್ಜಿತ್ ನೀಡಿದ ಗಾಯನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
ಜಾಗತಿಕ ಮ್ಯೂಸಿಕ್ ಸ್ಟ್ರೀಮಿಂಗ್ ವೇದಿಕೆಗಳ ಟಾಪ್–10 ಕಲಾವಿದರ ಪಟ್ಟಿಯಲ್ಲಿ ನಿರಂತರವಾಗಿ ಸ್ಥಾನ ಪಡೆದಿರುವ ಅರ್ಜಿತ್ ಸಿಂಗ್, ಮುಂದಿನ ದಿನಗಳಲ್ಲಿ ಸ್ವತಂತ್ರ ಸಂಗೀತ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬುವ ನಿರೀಕ್ಷೆ ವ್ಯಕ್ತವಾಗುತ್ತಿದೆ.


