ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ನಿಯಂತ್ರಣ ಕ್ರಮಗಳ ವಿರುದ್ಧ ಆಕ್ರೋಶ ತೀವ್ರಗೊಂಡಿದೆ. ಮಿನ್ನೆಸೋಟಾ ರಾಜ್ಯದ ಅತಿದೊಡ್ಡ ವಿಮಾನ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯ ವೇಳೆ ಸುಮಾರು 100ಕ್ಕೂ ಹೆಚ್ಚು ಧಾರ್ಮಿಕ ಪಾದ್ರಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಿನ್ನೆಸೋಟಾದಾದ್ಯಂತ ಟ್ರಂಪ್ ಆಡಳಿತದ ವಲಸೆ ದಮನ ನೀತಿಗಳನ್ನು ಖಂಡಿಸಿ ಸಾವಿರಾರು ಜನರು ಕಡು ಚಳಿಯನ್ನು ಲೆಕ್ಕಿಸದೇ ಬೀದಿಗಿಳಿದರು. −29 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲೂ ಜನಸಾಗರವೇ ರಸ್ತೆಗಳನ್ನು ತುಂಬಿಕೊಂಡಿತು.
ಮೆಟ್ರೋಪಾಲಿಟನ್ ಏರ್‌ಪೋರ್ಟ್ ಕಮಿಷನ್ ವಕ್ತಾರ ಜೆಫ್ ಲಿಯಾ ಮಾಹಿತಿ ನೀಡಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸಿದ ಪಾದ್ರಿಗಳ ವಿರುದ್ಧ ಅಕ್ರಮ ಪ್ರವೇಶ ಹಾಗೂ ಶಾಂತಿ ಪಾಲನಾ ಅಧಿಕಾರಿಗಳ ಆದೇಶ ಪಾಲಿಸದ ಆರೋಪದಡಿ ಲಘು ಪ್ರಕರಣ ದಾಖಲಿಸಿ ನಂತರ ಬಿಡುಗಡೆ ಮಾಡಲಾಗಿದೆ ಎಂದರು.
ಈ ಪ್ರತಿಭಟನೆಗಳು ಕೇವಲ ಧಾರ್ಮಿಕ ಸಂಘಟನೆಗಳಿಗೆ ಸೀಮಿತವಾಗಿಲ್ಲ. ಕಾರ್ಮಿಕ ಸಂಘಗಳು, ಪ್ರಗತಿಪರ ಸಂಘಟನೆಗಳು ಮತ್ತು ನಾಗರಿಕ ಸಂಘಗಳು ಕೂಡಾ ಮಿನ್ನೆಸೋಟಾ ನಿವಾಸಿಗಳಿಗೆ ಕೆಲಸ, ಶಾಲೆ ಹಾಗೂ ವ್ಯಾಪಾರ ಚಟುವಟಿಕೆಗಳಿಂದ ದೂರವಿರಲು ಕರೆ ನೀಡಿವೆ. ಪರಿಣಾಮವಾಗಿ ರಾಜ್ಯದ ಅನೇಕ ವ್ಯಾಪಾರ ಸಂಸ್ಥೆಗಳು ದಿನಪೂರ್ತಿ ಮುಚ್ಚಿದ್ದವು.
ಕಳೆದ ಕೆಲವು ವಾರಗಳಿಂದ ಯುಎಸ್ ಇಮಿಗ್ರೇಷನ್ ಅಂಡ್ ಕಸ್ಟಮ್ಸ್ ಎನ್ಫೋರ್ಸ್ಮೆಂಟ್ (ICE) ಅಧಿಕಾರಿಗಳು ಹಾಗೂ ಪ್ರತಿಭಟನಾಕಾರರ ನಡುವೆ ಸಂಘರ್ಷಗಳು ಹೆಚ್ಚಾಗಿವೆ. ಈ ತಿಂಗಳ ಆರಂಭದಲ್ಲಿ ನಡೆದ ವಲಸೆ ಜಾರಿಗೆ ಸಂಬಂಧಿಸಿದ ಕಾರ್ಯಾಚರಣೆಯಲ್ಲಿ ಐಸಿಇ ಏಜೆಂಟ್ ಜೊನಾಥನ್ ರಾಸ್ ಗುಂಡಿನ ದಾಳಿಗೆ 37 ವರ್ಷದ ಅಮೆರಿಕ ನಾಗರಿಕೆಯಾಗಿದ್ದ ತಾಯಿ ರೆನಿ ಗುಡ್ ಸಾವನ್ನಪ್ಪಿದ್ದ ಘಟನೆ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಘಟನೆ ಬಳಿಕ ಮಿನಿಯಾಪೊಲಿಸ್ ಪ್ರದೇಶದಲ್ಲಿ ಪ್ರತಿದಿನವೂ ಪ್ರತಿಭಟನೆಗಳು ನಡೆಯುತ್ತಿವೆ.
ಈ ನಡುವೆ, ಯುನೈಟೆಡ್ ನೇಷನ್ಸ್ ಮಾನವ ಹಕ್ಕುಗಳ ಉನ್ನತ ಆಯುಕ್ತ ವೋಲ್ಕರ್ ಟರ್ಕ್, ಅಮೆರಿಕದ ವಲಸೆ ಜಾರಿಗೆ ಸಂಬಂಧಿಸಿದ ಅನಗತ್ಯ ಹಾಗೂ ಅತಿರೇಕದ ಬಲಪ್ರಯೋಗವನ್ನು ತೀವ್ರವಾಗಿ ಖಂಡಿಸಿದ್ದಾರೆ. ವಲಸಿಗರು ಮತ್ತು ಶರಣಾರ್ಥಿಗಳ ಮೇಲೆ ನಡೆಯುತ್ತಿರುವ ಅವಮಾನ ಹಾಗೂ ದುರುಪಯೋಗ ಸಾಮಾನ್ಯವಾಗುತ್ತಿರುವುದು ಆತಂಕಕಾರಿ ಎಂದು ಅವರು ಹೇಳಿದ್ದಾರೆ.
ಬಂಧಿತರಾಗಿರುವ ಹಲವರಿಗೆ ಸಮಯಕ್ಕೆ ಸರಿಯಾಗಿ ಕಾನೂನು ನೆರವು ದೊರೆಯುತ್ತಿಲ್ಲ ಎಂಬುದನ್ನೂ ಅವರು ಉಲ್ಲೇಖಿಸಿದರು. ವಲಸೆ ನೀತಿಗಳು ಮಾನವ ಘನತೆ ಹಾಗೂ ನ್ಯಾಯಸಮ್ಮತ ಪ್ರಕ್ರಿಯೆಗಳನ್ನು ಗೌರವಿಸುವಂತೆ ಅಮೆರಿಕ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವೋಲ್ಕರ್ ಟರ್ಕ್ ಆಗ್ರಹಿಸಿದ್ದಾರೆ. ಜೊತೆಗೆ ಐಸಿಇ ವಶದಲ್ಲಿರುವವರ ಸಾವಿನ ಪ್ರಕರಣಗಳ ಕುರಿತು ಸ್ವತಂತ್ರ ಹಾಗೂ ಪಾರದರ್ಶಕ ತನಿಖೆ ನಡೆಸಬೇಕೆಂದು ಕರೆ ನೀಡಿದ್ದಾರೆ.


