“ತಿನ್ನಬಾರದನ್ನು ತಿಂದ ಅಧಿಕಾರಿಗಳು?” — ವಾಸವಿ ಕಾಂಡಿಮೆಂಟ್ಸ್ ಮೇಳಕ್ಕೆ 9 ದಿನಗಳ ಅನುಮತಿ ವಿವಾದ

2 Min Read
2 Min Read

“ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಆಟದ ಮೈದಾನವನ್ನು ಖಾಸಗಿ ಸಂಸ್ಥೆಯ ಕಾರ್ಯಕ್ರಮಕ್ಕೆಂದು ಒಂಬತ್ತು ದಿನಗಳ ಕಾಲ ಬಳಸಿಕೊಳ್ಳಲು ಅನುಮತಿ ನೀಡಿರುವ “ಬೆಂಗಳೂರು ಕೇಂದ್ರ ನಗರ ಪಾಲಿಕೆ”ಯ ಚಿಕ್ಕಪೇಟೆ ವಿಭಾಗದ ಕಾರ್ಯಪಾಲಕ ಅಭಿಯಂತರರ ನಿಯಮಬಾಹಿರ ಕಾರ್ಯದ ಬಗ್ಗೆ ದೂರು.”

ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಥವಾ ಈಗಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಪಾಲಿಕೆ ಅಧೀನದಲ್ಲಿರುವ ಆಟದ ಮೈದಾನಗಳನ್ನು ಮತ್ತು ಒಳಾಂಗಣ ಕ್ರೀಡಾಂಗಣಗಳನ್ನು ಯಾವುದೇ ಖಾಸಗಿ ಕಾರ್ಯಕ್ರಮಗಳ ಬಳಕೆಗೆಂದು ಅನುಮತಿ ನೀಡುವ ಸಂದರ್ಭಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನಿಯಮಾನುಸಾರ ಕೇವಲ ನಾಲ್ಕು ದಿನಗಳ ಬಳಕೆಗೆ ಮಾತ್ರವೇ ಅವಕಾಶ ನೀಡಬಹುದಾಗಿರುತ್ತದೆ.

ಪ್ರತೀ ಒಂದು ತಿಂಗಳ ಅವಧಿಯಲ್ಲಿ ಯಾವುದಾದರೂ ನಾಲ್ಕು ದಿನಗಳ ಕಾಲ ಆಯಾ ಆಟದ ಮೈದಾನಗಳು / ಒಳಾಂಗಣ ಕ್ರೀಡಾಂಗಣಗಳನ್ನು ಖಾಸಗಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಅವಕಾಶವಿದ್ದು, ಯಾವುದೇ ಒಂದು ತಿಂಗಳ ಕೊನೆಯ ನಾಲ್ಕು ದಿನಗಳು ಮತ್ತು ಅದರ ಮುಂದಿನ ತಿಂಗಳ ಪ್ರಾರಂಭದ ನಾಲ್ಕು ದಿನಗಳನ್ನು ಸೇರಿಸಿ ಒಟ್ಟಾರೆಯಾಗಿ ಎಂಟು ದಿನಗಳ ಕಾಲ ನಿರಂತರ ಬಳಕೆಗೆ ಅವಕಾಶ ನೀಡುವಂತಿಲ್ಲ.

ಆಯಾ ಪ್ರದೇಶಗಳಲ್ಲಿರುವ ಆಟದ ಮೈದಾನಗಳಲ್ಲಿ ಮತ್ತು ಒಳಾಂಗಣ ಕ್ರೀಡಾಂಗಣಗಳಲ್ಲಿ ಸ್ಥಳೀಯ ಕ್ರೀಡಾ ಪ್ರತಿಭೆಗಳಿಗೆ, ಯುವಕ – ಯುವತಿಯರಿಗೆ ಆಟವಾಡಲು ಅವಕಾಶ ಮಾಡಿಕೊಡಬೇಕಿರುವುದು ಸ್ಥಳೀಯ ಸಂಸ್ಥೆಗಳ ಆದ್ಯ ಕರ್ತವ್ಯವಾಗಿರುತ್ತದೆ. ವಾರಾನುಗಟ್ಟಲೆ ಖಾಸಗಿ ಕಾರ್ಯಕ್ರಮಗಳಿಗೆಂದು ಅನುಮತಿ ನೀಡಿದರೆ, ಅಂತಹ ಕ್ರೀಡಾ ಪ್ರತಿಭೆಗಳ ಅಭ್ಯಾಸ ಕಾರ್ಯಗಳನ್ನು ಮತ್ತು ಯುವಕ – ಯುವತಿಯರ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ಕ್ರೀಡಾ ಚಟುವಟಿಕೆಗಳನ್ನು ಹತ್ತಿಕ್ಕಿದಂತಾಗುತ್ತದೆ. ಇಂತಹ ಕಾರ್ಯಗಳು ಅತ್ಯಂತ ಸ್ಪಷ್ಟವಾಗಿ ಕಾನೂನು ಬಾಹಿರ ಕಾರ್ಯಗಳಾಗಿರುತ್ತದೆ.

“ಶ್ರೀ ವಾಸವಿ ಕಾಂಡಿಮೆಂಟ್ಸ್”ಸಂಸ್ಥೆಯವರು “ಅವರೆಬೇಳೆ ಮೇಳ”ವನ್ನು ನಡೆಸಲು ದಿನಾಂಕ 27/12/2025 ರಿಂದ 04/01/2026 ರವರೆಗೆ ಒಟ್ಟು ಒಂಬತ್ತು ದಿನಗಳ ಅವಧಿಗೆ ಅನುಮತಿ ನೀಡುವ ಮೂಲಕ “ಬೆಂಗಳೂರು ಕೇಂದ್ರ ನಗರ ಪಾಲಿಕೆ”ಯ ಚಿಕ್ಕಪೇಟೆ ವಿಭಾಗದ ಕಾರ್ಯಪಾಲಕ ಅಭಿಯಂತರ ಪ್ರದೀಪ್ ಎಂಬ ಪರಮ ಭ್ರಷ್ಟ ಅಧಿಕಾರಿ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಈ ಸಂಬಂಧ ಅವರ ಕಛೇರಿಯ ಅಧಿಕಾರಿಗಳನ್ನು ವಿಚಾರಿಸಿದಾಗ “2025 ರ ಡಿಸೆಂಬರ್ ತಿಂಗಳ ಕೋಟಾದಲ್ಲಿ ನಾಲ್ಕು ದಿನಗಳು ಮತ್ತು 2026 ರ ಜನವರಿ ತಿಂಗಳ ಕೋಟಾದಲ್ಲಿ ನಾಲ್ಕು ದಿನಗಳನ್ನು ಸೇರಿಸಿ ಅನುಮತಿ ನೀಡಲಾಗಿದೆ”ಎಂಬ ಹಾರಿಕೆಯ ಉತ್ತರ ನೀಡಿದ್ದಾರೆ. “ತಮ್ಮ ಕಛೇರಿಯಿಂದ ಅನುಮತಿ ನೀಡಿರುವುದು ನಿರಂತರ ಒಂಬತ್ತು ದಿನಗಳ ಅವಧಿಗೆ”ಎಂದು ಹೇಳಿದಾಗ ಅವರಿಂದ ಯಾವುದೇ ಉತ್ತರವಿಲ್ಲ !!!

“ಶ್ರೀ ವಾಸವಿ ಕಾಂಡಿಮೆಂಟ್ಸ್”ನವರು ಒಂಬತ್ತು ದಿನಗಳ ಕಾಲ ನಡೆಸುತ್ತಿರುವ “ಅವರೆಬೇಳೆ ಮೇಳ”ದಿಂದ ಕೋಟ್ಯಾಂತರ ರೂಪಾಯಿ ಆದಾಯ ಗಳಿಸುತ್ತಾರೆ. ಅಂತಹ ವ್ಯಾವಹಾರಿಕ ಪ್ರಧಾನ ಸಂಸ್ಥೆಗೆ ಯಾವುದಾದರೂ ಖಾಸಗಿ ಕಲ್ಯಾಣ ಮಂಟಪಗಳಲ್ಲಿ ಅಥವಾ ಖಾಸಗಿ ಕ್ರೀಡಾಂಗಣಗಳಲ್ಲಿ ಈ “ಅವರೆಬೇಳೆ ಮೇಳ”ನಡೆಸಿಕೊಳ್ಳುವಂತೆ ಹೇಳಿ ಕಳುಹಿಸಬಹುದಿತ್ತು.

ಆದರೆ, “ಶ್ರೀ ವಾಸವಿ ಕಾಂಡಿಮೆಂಟ್ಸ್”ನವರಿಂದ ತಿನ್ನಬಾರದನ್ನು ತಿಂದಿರುವ “ಚಿಕ್ಕಪೇಟೆ ವಿಭಾಗ”ದ ಅಧಿಕಾರಿಗಳು, ಇಡೀ ಬಸವನಗುಡಿ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿರುವ ರಾಜ್ಯ / ರಾಷ್ಟ್ರೀಯ ಮಟ್ಟದ ಕ್ರೀಡಾ ಪ್ರತಿಭೆಗಳಿಗೆ ಹಾಗೂ ಯುವಕ – ಯುವತಿಯರು ತಮ್ಮ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ಪ್ರತೀ ನಿತ್ಯ ಮಾಡುವ ಚಟುವಟಿಕೆಗಳನ್ನು ಸಂಪೂರ್ಣವಾಗಿ ಹತ್ತಿಕ್ಕಿ ಒಂಬತ್ತು ದಿನಗಳ ಕಾಲ ತಮ್ಮ ಸ್ವಾರ್ಥಕ್ಕಾಗಿ / ಖಾಸಗಿ ಸಂಸ್ಥೆಯೊಂದು ಕೋಟ್ಯಾಂತರ ರೂಪಾಯಿ ಲಾಭ ಗಳಿಸಲು ಅವಕಾಶ ಮಾಡಿಕೊಟ್ಟಿರುವ “ಚಿಕ್ಕಪೇಟೆ ವಿಭಾಗ”ದ ಕಾರ್ಯಪಾಲಕ ಅಭಿಯಂತರರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಮಾನ್ಯ ಆಯುಕ್ತರನ್ನು ಆಗ್ರಹಿಸಲಾಗಿದೆ.

Share This Article
Leave a Comment