ಮೆಕ್ಸಿಕೋದಲ್ಲಿ ಪ್ರಯಾಣಿಕರ ರೈಲು ಪಾತಳಿಯಿಂದ ಜಾರಿ ಬಿದ್ದ ಪರಿಣಾಮ ಭೀಕರ ದುರಂತ ಸಂಭವಿಸಿದೆ. ಇಸ್ತ್ಮಸ್ ಆಫ್ ತೆಹುವಾಂಟೆಪೆಕ್‌ನ ಇಂಟರ್‌ಓಷ್ಯಾನಿಕ್ ಕಾರಿಡಾರ್ ವ್ಯಾಪ್ತಿಯ ಸಾಲಿನಾ ಕ್ರೂಜ್–ಕೋಅಟ್ಸಾಕೋಆಲ್ಕೋಸ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲು ಅಪಘಾತಕ್ಕೀಡಾಗಿ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ, 98 ಮಂದಿ ಗಾಯಗೊಂಡಿದ್ದಾರೆ ಎಂದು ಮೆಕ್ಸಿಕನ್ ನೌಕಾಪಡೆ ಅಧಿಕೃತವಾಗಿ ತಿಳಿಸಿದೆ.
ಅಪಘಾತ ಸಂಭವಿಸಿದ ವೇಳೆ ರೈಲಿನಲ್ಲಿ ಸುಮಾರು 250ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಗಾಯಗೊಂಡವರಲ್ಲಿ 36 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, 139 ಮಂದಿ ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಘಟನೆಯ ತಕ್ಷಣವೇ ಮೆಕ್ಸಿಕನ್ ನೌಕಾಪಡೆ 360 ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ಆಂಬ್ಯುಲೆನ್ಸ್‌ಗಳು, ವಾಯು ಸಹಾಯ, ವಿಶೇಷ ವಾಹನಗಳು ಹಾಗೂ ಡ್ರೋನ್‌ಗಳ ಮೂಲಕ ಶೋಧ–ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಪ್ರಾರಂಭಿಸಲಾಗಿದ್ದು, ಪಾತಳಿ ಸ್ಥಿತಿ ಮತ್ತು ತಾಂತ್ರಿಕ ದೋಷಗಳ ಕುರಿತು ಪರಿಶೀಲನೆ ನಡೆಯುತ್ತಿದೆ.
ಈ ದುರಂತಕ್ಕೆ ರಾಷ್ಟ್ರಪತಿ ಕ್ಲಾಡಿಯಾ ಶೈನ್‌ಬಾಮ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ತಕ್ಷಣವೇ ಉನ್ನತ ಮಟ್ಟದ ಅಧಿಕಾರಿಗಳನ್ನು ಅಪಘಾತ ಸ್ಥಳಕ್ಕೆ ಕಳುಹಿಸುವಂತೆ ಆದೇಶಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ನೆರವು ಹಾಗೂ ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ಸಹಾಯ ಒದಗಿಸುವಂತೆ ಅವರು ಸೂಚಿಸಿದ್ದಾರೆ. ಸರ್ಕಾರವು ಪಾರದರ್ಶಕ ತನಿಖೆ ನಡೆಸಿ ಸಂತ್ರಸ್ತರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದೆ.


