ಕುಣಿಗಲ್ ಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ಅಕ್ರಮ ಮತ್ತು ಅವ್ಯವಹಾರ? ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಭಕ್ತರ ಎಚ್ಚರಿಕೆ!

2 Min Read
2 Min Read

ಕುಣಿಗಲ್, ನ.13:
ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಹೋಬಳಿಯ ಮೆಣಸಿಹಳ್ಳಿ ಗ್ರಾಮದ ಪುರಾತನ ಶ್ರೀ ಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ಅಕ್ರಮ ನೇಮಕಾತಿ ಹಾಗೂ ಹಣಕಾಸು ಅವ್ಯವಹಾರಗಳ ಆರೋಪಗಳು ಬೆಳಕಿಗೆ ಬಂದಿವೆ.

ಸರ್ಕಾರದ ಧಾರ್ಮಿಕ ದತ್ತಿ (ಮುಜರಾಯಿ) ಇಲಾಖೆಗೆ ಒಳಪಟ್ಟಿರುವ ಬಿ ವರ್ಗದ ದೇವಾಲಯದಲ್ಲಿ, ಸರ್ಕಾರದ ಆದೇಶವಿಲ್ಲದೆ ಕೆಲವರು “ಸರ್ಕಾರದ ಸಿಬ್ಬಂದಿ” ಎಂದು ಹೇಳಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಶ್ರೀ ಚಂದ್ರಶೇಖರ್ ಮತ್ತು ಶ್ರೀಮತಿ ನಾಗರತ್ನ ಎಂಬವರು ಈ ದೇವಾಲಯದಲ್ಲಿ ಸರ್ಕಾರದ ಅಧಿಕೃತ ನೇಮಕಾತಿಯಿಲ್ಲದೆ ಕೆಲಸ ಮಾಡುತ್ತಿದ್ದಾರೆ ಎಂಬ ದೂರಿನ ಮೇರೆಗೆ, ತುಮಕೂರು ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಹಾಗೂ ಕುಣಿಗಲ್ ಪೊಲೀಸ್ ಠಾಣೆಗೆ ಸಂಬಂಧಪಟ್ಟ ದಾಖಲೆಗಳು ಮತ್ತು ಪತ್ರಗಳು ಕಳುಹಿಸಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ, 2021ರ ಜುಲೈ 23ರಂದು ಭಕ್ತರು ಮತ್ತು ಗ್ರಾಮಸ್ಥರು ತುಮಕೂರು ಜಿಲ್ಲಾಧಿಕಾರಿಗಳಿಗೆ ಅಧಿಕೃತ ದೂರು ಸಲ್ಲಿಸಿದ್ದರು. ದೂರು ಪ್ರಕಾರ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಮುಜರಾಯಿ ಇಲಾಖೆಯಿಂದ ನೇಮಕಗೊಂಡ ಕೆಲವರು ಹೊರಗುತ್ತಿಗೆ ಸಿಬ್ಬಂದಿಯನ್ನು ಸರಕಾರದ ಅನುಮೋದನೆಯಿಲ್ಲದೆ ಕೆಲಸಕ್ಕೆ ತೆಗೆದುಕೊಂಡು, ದೇವಾಲಯದ ನಿಧಿಯಿಂದ ವೇತನ ಪಾವತಿಸಿ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪ ಉಂಟಾಗಿದೆ.

ಮುಜರಾಯಿ ಇಲಾಖೆಯ ನಿರ್ದೇಶನದ ಪ್ರಕಾರ, ದೇವಾಲಯದ ಮಾನವ ಸಂಪನ್ಮೂಲ ಸೇವೆಯನ್ನು ಬೆಂಗಳೂರು ಆಧಾರಿತ “ಜೀ ಫೋರ್ಸ್ ಸೆಕ್ಯೂರಿಟಿ ಅಂಡ್ ಅಲೈಡ್ ಸರ್ವೀಸಸ್” ಸಂಸ್ಥೆಯ ಮೂಲಕ ಹೊರಗುತ್ತಿಗೆ ಆಧಾರದಲ್ಲಿ ಒಂದು ವರ್ಷಕ್ಕೆ ನೀಡಲು ಅನುಮತಿ ನೀಡಲಾಗಿತ್ತು. ಪ್ರತಿ ಸಿಬ್ಬಂದಿಗೆ ₹22,077.74 ರೂ. ಮಾಸಿಕ ವೇತನ ನೀಡುವ ಷರತ್ತು ನಿಗದಿಯಾಗಿತ್ತು.

ಆದರೆ ಈ ನಿಯಮವನ್ನು ಉಲ್ಲಂಘಿಸಿ ಅಧಿಕೃತ ಹೊರಗುತ್ತಿಗೆ ಅವಧಿ ಮುಗಿದ ಬಳಿಕವೂ ಅನಧಿಕೃತವಾಗಿ ಕೆಲಸ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಭಕ್ತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಭಕ್ತರು ಸರ್ಕಾರ ಮತ್ತು ಸ್ಥಳೀಯ ಶಾಸಕರನ್ನು ಮನವಿ ಮಾಡಿಕೊಂಡು,

“ದೇವಾಲಯದಲ್ಲಿ ನಡೆಯುತ್ತಿರುವ ಅಕ್ರಮ, ಭ್ರಷ್ಟಾಚಾರ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ತಕ್ಷಣ ನಿಲ್ಲಿಸಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು,”
ಎಂದು ಆಗ್ರಹಿಸಿದ್ದಾರೆ.

ಅವರು ಇನ್ನೂ ಎಚ್ಚರಿಸಿದ್ದಾರೆ —

“ಈ ರೀತಿಯ ಘಟನೆಗಳು ಮುಂದುವರಿದರೆ ದೇವಾಲಯದ ಗೌರವ, ಪ್ರಸಿದ್ಧಿ ಮತ್ತು ಭಕ್ತರ ವಿಶ್ವಾಸ ಕುಗ್ಗುತ್ತದೆ,”
ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

 


 

Share This Article
Leave a Comment