ಬೆಂಗಳೂರು, ನ.10:
ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಕೈದಿಗಳಿಗೆ ಐಷಾರಾಮಿ ‘ರಾಜಾತಿಥ್ಯ’ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆ, ರಾಜ್ಯ ರಾಜಕೀಯದಲ್ಲಿ ಚರ್ಚೆ ಜೋರಾಗಿದೆ. ಈ ಕುರಿತಂತೆ ಬಿಜೆಪಿ ನಾಯಕರು ಸೋಮವಾರ ಭಾರೀ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ಪೊಲೀಸರು ರೇಸ್ಕೋರ್ಸ್ ರಸ್ತೆಯಲ್ಲೇ ಬಿಜೆಪಿ ನಾಯಕರನ್ನು ತಡೆದು ವಶಕ್ಕೆ ಪಡೆದರು. ಪ್ರತಿಭಟನೆಯಲ್ಲಿ ಬಿ.ವೈ. ವಿಜಯೇಂದ್ರ, ಸಿ.ಟಿ. ರವಿ, ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು.
ಬಿಜೆಪಿ ನಾಯಕರು “ಜೈಲುಗಳಲ್ಲಿ ಉಗ್ರರಿಗೆ ಐಷಾರಾಮಿ ಸೌಲಭ್ಯ, ಇದು ನಾಚಿಕೆಗೇಡಿನ ಕ್ರಮ” ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾರಿಕೇಡ್ ಹತ್ತಿದ ಸಿ.ಟಿ. ರವಿ ಮತ್ತು ನಾರಾಯಣಸ್ವಾಮಿ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ,
“ಉಗ್ರ ಸಂಘಟನೆ ISIS ಸಂಪರ್ಕ ಹೊಂದಿರುವ ಕೈದಿಗಳಿಗೆ ಸಕಲ ಸವಲತ್ತುಗಳನ್ನು ನೀಡಲಾಗಿದೆ. ಇದು ದೇಶದ ಭದ್ರತೆಯ ವಿರುದ್ಧದ ಕೃತ್ಯ. ಜೈಲು ಅಧಿಕಾರಿಗಳನ್ನು ಬಂಧಿಸಿ, ದೇಶದ್ರೋಹ ಪ್ರಕರಣ ದಾಖಲಿಸಬೇಕು,”
ಎಂದು ಆಗ್ರಹಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು:
“ಜೈಲುಗಳು ಈಗ ಉಗ್ರರಿಗೆ ಸ್ವರ್ಗ, ಪಂಚತಾರಾ ಹೋಟೆಲ್ ಆಗಿವೆ! ಗಾಂಜಾ, ಬಿರಿಯಾನಿ, ಮೊಬೈಲ್ ಎಲ್ಲವೂ ಸಿಗುತ್ತಿವೆ. ಇದು ಕಾಂಗ್ರೆಸ್ನ ‘ಬಿಟ್ಟಿ ಗ್ಯಾರಂಟಿ’!”
ಎಂದು ವ್ಯಂಗ್ಯವಾಡಿದರು.
ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಉಗರೆದು,
“ಭಯೋತ್ಪಾದಕರಿಗೆ ಜೈಲಿನಲ್ಲಿ ಬಿರಿಯಾನಿ ಪಾರ್ಟಿ ನಡೆಯುತ್ತಿದೆ. ಇದು ಜೈಲುನಾ, ರೆಸಾರ್ಟಾ?”
ಎಂದು ಪ್ರಶ್ನಿಸಿದರು.
ಅದೇ ವೇಳೆ ಸಿ.ಟಿ. ರವಿ ಹೇಳಿದರು,
“ಈ ಸರ್ಕಾರಕ್ಕೆ ನಾಚಿಕೆ ಆಗಬೇಕು! ಸಿಎಂ ಮತ್ತು ಗೃಹ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು. ಈ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು,”
ಎಂದು ಆಗ್ರಹಿಸಿದರು.
ಪೊಲೀಸರ ಮಧ್ಯಪ್ರವೇಶದಿಂದ ಪ್ರತಿಭಟನೆ ನಿಯಂತ್ರಣಕ್ಕೆ ಬಂತಾದರೂ, ಜೈಲು ರಾಜ್ಯಾತಿಥ್ಯ ವಿವಾದವು ರಾಜಕೀಯವಾಗಿ ಹೊಸ ಬಿರುಗಾಳಿಯನ್ನು ಎಬ್ಬಿಸಿದೆ.


