ಬೆಂಗಳೂರು, ನ.9:
ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರು ಹಾಗೂ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ರಾಮಲಿಂಗಾರೆಡ್ಡಿ ರವರು, ಬೆಂಗಳೂರು ದಕ್ಷಿಣ ನಗರ ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
2024-25ನೇ ಸಾಲಿನ ರೂ.27 ಕೋಟಿ ಮೌಲ್ಯದ ಅನುಮೋದಿತ ಪಿ.ಓ.ಡಬ್ಲ್ಯೂ ಕಾಮಗಾರಿಗಳ ಪೈಕಿ ಕೆಲವು ಪ್ರಾರಂಭವಾಗದಿರುವುದನ್ನು ಗಮನಿಸಿ, ಜೆ.ಡಿ. ಮರ ಸ್ಲಂ ಹಾಗೂ ಎನ್.ಎಸ್ ಪಾಳ್ಯ ವಾರ್ಡ್‌ನ ಅಂಗನವಾಡಿ ಕಟ್ಟಡ ಕಾಮಗಾರಿ ಕೂಡಲೇ ಪ್ರಾರಂಭಿಸಲು ಅವರು ಸೂಚಿಸಿದರು.
ನಿಗದಿತ ಅವಧಿಯಲ್ಲಿ ಕೆಲಸ ಮುಗಿಸದ ಗುತ್ತಿಗೆದಾರರಿಗೆ ಹಲವು ಬಾರಿ ಅವಕಾಶ ನೀಡಿದರೂ ಸಹ ಕೆಲಸ ಪೂರ್ಣಗೊಳಿಸದಿದ್ದರೆ ಟೆಂಡರ್ ರದ್ದುಪಡಿಸಿ ಮರು ಟೆಂಡರ್ ಕರೆಯಲು ಸಚಿವರು ಅಧಿಕಾರಿಗಳಿಗೆ ಆದೇಶಿಸಿದರು.
ಅಲ್ಲದೆ, ಯಾವುದೇ ಬಿಲ್ ಪಾವತಿಗೆ ಮುನ್ನ ಜಿ.ಪಿ.ಎಸ್ ಚಿತ್ರಗಳೊಂದಿಗೆ ಸಂಪೂರ್ಣ ದಾಖಲೆ ಪರಿಶೀಲನೆ ಕಡ್ಡಾಯ ಎಂದು ಹೇಳಿದರು. ಕರಾರಿನ ಅಂಶಗಳನ್ನು ಪಾಲಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಸೂಚಿಸಿದರು.
ಲಕ್ಕಸಂದ್ರ ಶಾಲೆ ಕಾಮಗಾರಿ ವೇಳೆ ಮಕ್ಕಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದರು. ಹಿಂದಿನ ಸಾಲಿನ ಟೆಂಡರ್ ಕಾಮಗಾರಿಗಳು ಪೂರ್ಣಗೊಂಡ ನಂತರವೇ ಹೊಸ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಲು ಹೇಳಿದರು.
🏗️ ಪ್ರಮುಖ ಸೂಚನೆಗಳು:
- ಪಾದಚಾರಿ ಮಾರ್ಗಗಳನ್ನು ಸರಿಯಾಗಿ ನಿರ್ವಹಿಸಬೇಕು.
- ಕಾರ್ಯನಿರ್ವಹಿಸದ ಸಿ.ಸಿ ಟಿವಿಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ಹೊಸದಾಗಿ ಅಳವಡಿಸಬೇಕು.
- ಕಿರಿಯ ಮತ್ತು ಸಹಾಯಕ ಅಭಿಯಂತರರು ದ್ವಿಚಕ್ರ ವಾಹನಗಳಲ್ಲಿ ರಸ್ತೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು.
- ಕಾರ್ಯನಿರ್ವಹಿಸದ ಸ್ಕೈವಾಕ್‌ಗಳನ್ನು PPP ಅಡಿಯಲ್ಲಿ ಮರುಸ್ಥಾಪಿಸಬೇಕು.
- ಬ್ಲಾಕ್ ಸ್ಪಾಟ್‌ಗಳನ್ನು ತೆರವುಗೊಳಿಸಿ, ಸ್ವಚ್ಛ ವಾತಾವರಣ ಕಲ್ಪಿಸಬೇಕು.
- ಈಜಿಪುರ ಮೇಲ್ಸೇತುವೆ ಬಳಿ ಬೀದಿ ದೀಪಗಳನ್ನು ಅಳವಡಿಸಲು ಸೂಚನೆ.
- ಮಡಿವಾಳ ಕೆರೆ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ನೀಡಲು ಹಾಗೂ ವೈಟ್ ಟಾಪಿಂಗ್ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಸಲಹೆ.
ಸಭೆಯಲ್ಲಿ ಆಯುಕ್ತ ಕೆ.ಎನ್. ರಮೇಶ್, ಅಪರ ಆಯುಕ್ತ ರಾಚಪ್ಪ, ಜಂಟಿ ಆಯುಕ್ತ ಸತೀಶ್ ಬಾಬು, ಮುಖ್ಯ ಅಭಿಯಂತರರು ಬಸವರಾಜ ಕಬಾಡೆ, ಕೆ.ವಿ. ರವಿ, ಹಾಗೂ ಪೊಲೀಸ್ ಇಲಾಖೆ ಮತ್ತು ಜಲಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.


