ಕಳೆದ ವರ್ಷ ಮ್ಯಾಕ್ಸ್ ಚಿತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಜೋಡಿ ಮತ್ತೆ ಮಾರ್ಕ್ ಎಂಬ ಆಕ್ಷನ್ ಎಂಟರ್ಟೈನರ್‌ನೊಂದಿಗೆ ದೊಡ್ಡ ಪರದೆಗೆ ಮರಳಿದ್ದಾರೆ. ಚಿತ್ರತಂಡ ಇಂದು ಬಿಡುಗಡೆ ಮಾಡಿದ ಕುತೂಹಲಕಾರಿ ಟೀಸರ್ ಈಗಲೇ ಸೋಷಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.
ಮಾಸ್ ಲುಕ್‌ನಲ್ಲಿ ಸುದೀಪ್ ಕಾಣಿಸಿಕೊಂಡಿರುವ ಈ ಟೀಸರ್ ಗ್ಯಾಂಗ್‌ಸ್ಟರ್‌ಗಳ ನಡುವಿನ ಉಗ್ರ ಹೋರಾಟದ ಸನ್ನಿವೇಶಗಳನ್ನು ತೋರಿಸುತ್ತಿದ್ದು, ಸುದೀಪ್ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ತುಂಬಿದೆ. ಒಂದು ನಿಮಿಷ 14 ಸೆಕೆಂಡುಗಳ ಈ ವಿಡಿಯೋ ಸುದೀಪ್‌ನ ಸ್ಟೈಲಿಷ್ ಆಕ್ಷನ್ ಅವತಾರವನ್ನು ಮನಮೋಹಕವಾಗಿ ತೋರಿಸುತ್ತದೆ.
‘ಮಾರ್ಕ್’ ಚಿತ್ರವನ್ನು ಮ್ಯಾಕ್ಸ್ ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ನವೀನ್ ಚಂದ್ರ, ದೀಪಶಿಖಾ, ಯೋಗಿ ಬಾಬು ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸತ್ಯ ಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸೆಂಧಿಲ್ ತ್ಯಾಗರಾಜನ್ ನಿರ್ಮಿಸಿರುವ ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಕ್ರಿಸ್‌ಮಸ್ ಹಬ್ಬದ ಸಂಭ್ರಮಕ್ಕೆ ಸುದೀಪ್ ಅಭಿಮಾನಿಗಳಿಗೆ ರಸದೌತಣ ನೀಡುವ ಉದ್ದೇಶದಿಂದ ಮಾರ್ಕ್ ಚಿತ್ರ ಡಿಸೆಂಬರ್ 25ರಂದು ಬಿಡುಗಡೆಯಾಗುತ್ತಿದೆ.


